ಕಂಗನಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ರೆಡಿಯಂತೆ; ಆದರೆ, ಒಂದು ಷರತ್ತಿದೆ!

Kangana Ranaut
Published on

ದೆಹಲಿ: ಭಾರತೀಯ ಜನತಾ ಪಕ್ಷವು ಒಪ್ಪಿ ಟಿಕೆಟ್​ ಕೊಟ್ಟರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಾಲಿವುಡ್​ ನಟಿ ಕಂಗನಾ ರಣಾವತ್ ಇತ್ತೀಚೆಗಷ್ಟೇ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷಕ್ಕೆ ಕಂಗನಾ ಬರುವುದಾದರೆ ಅವರಿಗೆ ಸುಸ್ವಾಗತ ಎಂದು ಹೇಳಿದ್ದಾರೆ. ಆದರೆ, ಪಕ್ಷ ಸೇರುವುದಕ್ಕೆ ಒಂದು ಷರತ್ತನ್ನೂ ಒಡ್ಡಿದ್ದಾರೆ.

ಇತ್ತೀಚೆಗೆ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಕಂಗನಾ ರಣಾವತ್​, 'ಸಮಾಜ ಸೇವೆ ಮಾಡುವುದು ಸಹ ನನ್ನ ಬಹಳ ವರ್ಷಗಳ ಆಸೆ. ಹಿಮಾಚಲ ಪ್ರದೇಶದ ಜನ ನನಗೆ ಸಮಾಜ ಸೇವೆ ಮಾಡುವ ಅವಕಾಶ ಕೊಟ್ಟರೆ, ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ಸಿಕ್ಕರೆ, ಖಂಡಿತಾ ಚುನಾವಣೆಗಳು ಸ್ಪರ್ಧಿಸುತ್ತೇನೆ. ಅದು ನನ್ನ ಸೌಭಾಗ್ಯ' ಎಂದು ಹೇಳಿಕೊಂಡಿದ್ದರು.

ಈ ಕುರಿತು ಭಾನುವಾರ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ನಡ್ಡಾ, 'ಕಂಗನಾ ರಣಾವತ್​ ಪಕ್ಷ ಸೇರುವುದಕ್ಕೆ ಬಯಸಿದರೆ ಅವರಿಗೆ ಸುಸ್ವಾಗತ. ಪಕ್ಷದಡಿ ಕೆಲಸ ಮಾಡಲು ಬಯಸುವವರಿಗೆ ಹೇರಳವಾಗಿ ಅವಕಾಶಗಲಿವೆ. ಆದರೆ, ಚುನಾವಣೆ ಸ್ಪರ್ಧಿಸುವ ವಿಷಯ ಬಂದರೆ, ಅಲ್ಲಿ ನನ್ನ ನಿರ್ಧಾರವೊಂದೇ ಗಣನೆಗೆ ಬರುವುದಿಲ್ಲ. ಕೆಳಹಂತದಿಂದ ಚುನಾವಣಾ ಸಮಿತಿಯವರೆಗೂ ಹಲವರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗುತ್ತದೆ' ಎಂದು ಹೇಳಿದ್ದಾರೆ.

'ಎಲ್ಲರಿಗೂ ಪಕ್ಷ ಸೇರುವುದಕ್ಕೆ ಸ್ವಾಗತವಿದೆ. ಆದರೆ, ಅವರಿಗೆ ಏನು ಸ್ಥಾನ ನೀಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಬೇಷರತ್ತಾಗಿ ಬರುವುದಾದರೆ ಸ್ವಾಗತ ಎಂದು ಎಲ್ಲರಿಗೂ ಹೇಳುತ್ತೇವೆ' ಎನ್ನುತ್ತಾರೆ ನಡ್ಡಾ.

ಒಂದು ಪಕ್ಷ, ಚುನಾವಣೆಗಳನ್ನು ಸ್ಪರ್ಧಿಸುವುದಕ್ಕೆ ಬಿಜೆಪಿಯಿಂದ ಅವಕಾಶ ಸಿಗದಿದ್ದರೆ ಮತ್ತು ಬರೀ ರಾಜಕೀಯ ಸೇರುವುದಕ್ಕೆ ಅನುಮತಿ ಸಿಕ್ಕರೆ, ಕಂಗನಾ ಒಪ್ಪುತ್ತಾರಾ? ಎಂಬ ಪ್ರಶ್ನೆ ಎಲ್ಲರದ್ದು. ಈ ಕುರಿತು ಅವರು ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net