'ಗಂಧದ ಗುಡಿ' ಸಿನಿಮಾವನ್ನು ಎಲ್ಲಾ ಶಾಲಾ ಮಕ್ಕಳು ನೋಡುವಂತಾಗಬೇಕು; ಶಿಕ್ಷಣ ಮಂತ್ರಿಗಳಿಗೆ ಸೂಲಿಬೆಲೆ ಮನವಿ

gg (1)
Published on

ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾದ 'ಗಂಧದ ಗುಡಿ' ಸಿನಿಮಾ ಕರ್ನಾಟಕದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಶಿಕ್ಷಣ ಮಂತ್ರಿಗಳಾದ ಬಿ.ಸಿ.ನಾಗೇಶ್​​ ತಮ್ಮ ಟ್ವೀಟರ್​​ನಲ್ಲಿ ಈ ಕುರಿತು ಪೋಸ್ಟ್​​ ಹಾಕಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೀಗ ಟ್ವೀಟರ್​ನಲ್ಲಿ ವಿಶಿಷ್ಟ ಅಭಿಯಾನ ಶುರುಮಾಡಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ, ಗಂಧದ ಗುಡಿ ಚಿತ್ರವನ್ನು ಸರ್ಕಾರದ ವತಿಯಿಂದ ಎಲ್ಲಾ ಶಾಲಾ ಮಕ್ಕಳಿಗೆ ಯಾಕೆ ತೋರಿಸಬಾರದು ಎಂದು ಪ್ರಶ್ನಿಸುವ ಮೂಲಕ ಶಿಕ್ಷಣ ಮಂತ್ರಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಬಿ.ಸಿ ನಾಗೇಶ್ ಅವರು ಟ್ವೀಟರ್​​ನಲ್ಲಿ ಸಿನಿಮಾ ಬಿಡುಗಡೆಯಾದ ದಿನ ಅದರ ಕುರಿತು ಪೋಸ್ಟ್​ ಹಾಕಿದ್ದರು. ಸಿನಿಮಾದಲ್ಲಿ 'ರಾಜ್ಯದ ರಮಣೀಯ ಪ್ರಕೃತಿ ಸೌಂದರ್ಯ, ವನ್ಯ ಮೃಗಗಳು, ನದಿ, ಸಮುದ್ರ, ಜಲಚರಗಳನ್ನು ಕಣ್ಮನ ತುಂಬುವಂತೆ ಚಿತ್ರಿಸಿ, ಮಹತ್ವದ ಸಂದೇಶವನ್ನು ನೀಡುವ 'ಕರ್ನಾಟಕ ರತ್ನ', ಯುವ ಜನತೆಯ ಕಣ್ಮಣಿ ಪುನೀತ್ ರಾಜಕುಮಾರ್ ಅವರ ಪರಿಸರ ಪ್ರೀತಿಯ 'ಗಂಧದಗುಡಿ' ಇಂದು ಬಿಡುಗಡೆಯಾಗಿದೆ. ಇಡೀ ತಂಡಕ್ಕೆ ಹಾರ್ದಿಕ ಶುಭಾಶಯಗಳು' ಎಂದು ಬರೆದುಕೊಂಡಿದ್ದರು.

ಶಿಕ್ಷಣ ಮಂತ್ರಿಗಳ ಈ ಪೋಸ್ಟ್​ಗೆ ಸೋಮವಾರ (ಅ.31) ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡುವ ಜತೆಗೆ ಮನವಿ ಮಾಡಿಕೊಂಡಿದ್ದಾರೆ. 'ನಾಗೇಶ್ ಜಿ, ಚಿತ್ರದ ವಸ್ತು ಭವಿಷ್ಯದ ಪೀಳಿಗೆಗೆ ಪ್ರಕೃತಿ, ವನ್ಯ ಜೀವಿಗಳ ಕುರಿತಂತೆ ಆಸಕ್ತಿ ಮತ್ತು ಪ್ರೀತಿ ಹುಟ್ಟಿಸುವಂಥದ್ದಾಗಿದೆ. ಅದನ್ನೇಕೆ ಶಾಲಾ ಮಕ್ಕಳಿಗೆ ತೋರಿಸುವ ವ್ಯವಸ್ಥೆ ಆಗಬಾರದು? ಸರ್ಕಾರವೇ ಎಲ್ಲೆಡೆ ಈ ಪ್ರಯತ್ನಕ್ಕೆ ಮುಂದಾದರೆ ಪುನೀತ್ ರಾಜಕುಮಾರ್​ರ ನೆನಪು ಮತ್ತು ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ' ಎಂಬ ಮನವಿ ಮೂಲಕ ಗಂಧದ ಗುಡಿ ಸಿನಿಮಾವನ್ನು ರಾಜ್ಯದ ಎಲ್ಲಾ ಶಾಲಾ ಮಕ್ಕಳು ನೋಡುವಂತಾಗಬೇಕು ಎಂದು ಕೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net