

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂಡೆಲ್ ಅವರಿಗೆ ನವೆಂಬರ್ 23 ಮತ್ತು 24ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಮುಂಬೈ ಪೊಲೀಸ್ ಸಮನ್ಸ್ ಕೊಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಕಂಗನಾ ಮತ್ತು ಆಕೆಯ ಸಹೋದರಿ ರಂಗೋಲಿ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಬರಹಗಳನ್ನು ಬರೆಯುವುದರ ಜತೆಗೆ ಕೋಮು ಸಾಮರಸ್ಯ ಕದಡುವ ಕೆಲಸವನ್ನು ಬರೆಯುತ್ತಿದ್ದಾರೆ ಎಂದು ಅವರಿಬ್ಬರ ಮೇಲೆ ದೂರು ನೀಡಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅವರಿಬ್ಬರಿಗೂ ಸಮನ್ಸ್ ನೀಡಲಾಗಿದೆ.
ಇದಕ್ಕೂ ಮುನ್ನ, ಕಂಗನಾ ಮತ್ತು ರಂಗೋಲಿಗೆ ಎರಡು ಬಾರಿ ಸಮನ್ಸ್ ನೀಡಲಾಗಿತ್ತು. ಅಕ್ಟೋಬರ್ 26 ಮತ್ತು 27ರಂದು ಅವರಿಬ್ಬರಿಗೂ ವಿಚಾರಣೆಗೆ ಬರುವಂತೆ ಹೇಳಲಾಗಿತ್ತು. ಆದರೆ, ಏನೋ ಕಾರಣ ನೀಡಿ ಇಬ್ಬರೂ ವಿಚಾರಣೆಗೆ ಹೋಗಲಿಲ್ಲ.
ಆ ನಂತರ ನವೆಂಬರ್ 9 ಮತ್ತು 10ಕ್ಕೆ ಎರಡನೆಯ ಬಾರಿಗೆ ಸಮನ್ಸ್ ಕೊಟ್ಟಿದ್ದು, ಆಗಲೇ ಅವರಿಬ್ಬರೂ ತಪ್ಪಿಸಿಕೊಂಡಿದ್ದರು. ಈ ಬಾರಿ ತಮ್ಮ ಕಸಿನ್ ಮದುವೆಯ ನೆಪ ಹೇಳಿ ತಪ್ಪಿಸಿಕೊಂಡಿದ್ದ ಅವರು, ನವೆಂಬರ್ 15ರ ನಂತರ ಬರುವುದಾಗಿ ತಿಳಿಸಿದ್ದರು. ಅದರಂತೆ. ನ 23 ಮತ್ತು 24ಕ್ಕೆ ಅವರಿಬ್ಬರ ವಿಚಾರಣೆಯನ್ನು ಇಟ್ಟುಕೊಳ್ಳಲಾಗಿದೆ.