'ಬಿಗ್​ ಬಾಸ್​' ನಡೆಸಿಕೊಡಲು ಕಮಲ್​ ಹಾಸನ್​ ಪಡೆಯಲಿರುವ ಸಂಭಾವನೆ ಎಷ್ಟು?

Kamal Hassan - Big Boss - Final
Published on

ಚೆನ್ನೈ: ತಮಿಳಿನ 'ಬಿಗ್​ ಬಾಸ್​' ಜನಪ್ರಿಯವಾಗಲು ಮುಖ್ಯ ಕಾರಣ ಕಮಲ್​ ಹಾಸನ್​. ಕಳೆದ ನಾಲ್ಕು ಸೀಸನ್​ಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಅವರು, ಈ ಬಾರಿ ನಡೆಸಿಕೊಡುತ್ತಾರೋ ಇಲ್ಲವೋ ಎಂಬ ಗುಮಾನಿ ಎಲ್ಲರಲ್ಲೂ ಇತ್ತು. ಅದಕ್ಕೆ ಕಾರಣ, ಈ ಬಾರಿ ಕಮಲ್​ ಹಾಸನ್​ ರಾಜಕೀಯದಲ್ಲಿ ಸಕ್ರಿಯವಾಗಿದ್ದರು ಮತ್ತು ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ತಮ್ಮ ಎಂಎನ್​ಎಂ ಪಕ್ಷದಿಂದ ಸ್ಪರ್ಧಿಸಿದ್ದರು.

ಒಂದು ಪಕ್ಷ ಕಮಲ್​ ಹಾಸನ್​ ಏನಾದರೂ ಚುನಾವಣೆಗಳಲ್ಲಿ ಗೆದ್ದಿದ್ದರೆ, 'ಬಿಗ್​ ಬಾಸ್​'ನ ಐದನೇ ಸೀಸನ್​ ನಡೆಸಿಕೊಡುವುದು ಬಹಳ ಕಷ್ಟವಾಗಿತ್ತು. ಆದರೆ, ಕಮಲ್​ ಹಾಸನ್​ ಚುನಾವಣೆಗಳಲ್ಲಿ ಸೋತಿದ್ದಷ್ಟೇ ಅಲ್ಲ, ಮತ್ತೆ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಬಹುಶಃ ಲಾಕ್​ಡೌನ್​ ಇಲ್ಲದಿದ್ದರೆ, ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದರೇನೋ?

ಅದರಿಲಿ, 'ಬಿಗ್​ ಬಾಸ್​'ನ ಐದನೇ ಸೀಸನ್​ನ್ನು ಕಮಲ್​ ಹಾಸನ್​ ನಡೆಸಿಕೊಡುವುದು ಪಕ್ಕಾ ಆಗಿದೆ. ಈ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬ ಚರ್ಚೆ ಇದೀಗ ನಡೆಯುತ್ತಿದೆ. ಮೂಲಗಳ ಪ್ರಕಾರ, 'ಬಿಗ್​ ಬಾಸ್​'ನ ವಾರಾಂತ್ಯದ ಎಪಿಸೋಡುಗಳನ್ನು ನಡೆಸಿಕೊಡುವುದಕ್ಕೆ ಕಮಲ್​ ಹಾಸನ್​ ಪಡೆಯುತ್ತಿದ್ದ ಮೊತ್ತ ವಾರಕ್ಕೆ ಮೂರು ಕೋಟಿ. ಈಗ ಆ ಸಂಭಾವನೆಯನ್ನು ಅವರು ಇನ್ನಷ್ಟು ಹೆಚ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ಕಮಲ್​ ಹಾಸನ್​ ಅವರು ತಮ್ಮ ವಾರದ ಸಂಭಾವನೆಯನ್ನು 50 ಲಕ್ಷದಷ್ಟು ಏರಿಸಿದ್ದು, ಹೊಸ ಸೀಸನ್​ನಲ್ಲಿ ಅವರು ಪ್ರತೀ ವಾರ ಮೂರೂವರೆ ಕೋಟಿ ಸಂಭಾವನೆ ಪಡೆಯಲಿದ್ದಾರೆ. ಒಟ್ಟಾರೆ, ಸೀಸನ್​ ಮುಗಿಯುವ ಹೊತ್ತಿಗೆ ಕಮಲ್​ಗೆ 50 ಕೋಟಿ ರೂ.ಗಳಷ್ಟು ಸಂಭಾವನೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು, 'ಬಿಗ್​ ಬಾಸ್​'ನ ಐದನೇ ಸೀಸನ್​ ಅಕ್ಟೋಬರ್​ನಿಂದ ಶುರುವಾಗಲಿದೆ ಎಂಬ ಸುದ್ದಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net