

ಮುಂಬೈ: ನಟ ಮತ್ತು ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ ವಿಷಯ ಗೊತ್ತೇ ಇದೆ. ಕಳೆದೆರೆಡು ದಿನಗಳಿಂದ ಈ ಸುದ್ದಿ ಬಾಲಿವುಡ್ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ಇಷ್ಟಕ್ಕೂ, ಕೆಆರ್ಕೆ ವಿರುದ್ಧ ಸಲ್ಮಾನ್ ಮೊಕದ್ದಮೆ ಹೂಡಿದ್ದು ಯಾಕೆ? ಎಂಬ ಪ್ರಶ್ನೆಗೆ ರಾಧೇ ಎಂಬ ಉತ್ತರ ಬರುತ್ತದೆ. ಕೆಲವು ದಿನಗಳ ಹಿಂದೆ ಸಲ್ಮಾನ್ ಅಭಿನಯದ ರಾಧೇ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ನೋಡಿ ಹಿಗ್ಗಾಮುಗ್ಗ ಬೈದು ವಿಮರ್ಶೆ ಮಾಡಿದ್ದರು ಕೆಆರ್ಕೆ. ಈ ವಿಮರ್ಶೆಯಿಂದ ಚಿತ್ರಕ್ಕೆ ಸಾಕಷ್ಟು ಸಮಸ್ಯೆ ಆಗಿತ್ತು ಮತ್ತು ಇದರಿಂದ ಬೇಸತ್ತು ಸಲ್ಮಾನ್ ಕೇಸು ಜಡಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ವಿಷಯ ಬೇರೆಯೇ ಇದೆಯಂತೆ. ಮೂಲಗಳ ಪ್ರಕಾರ, ಕಳೆದ ವರ್ಷ ಸುಶಾಂತ್ ಸಿಂಗ್ ರಜಪೂತ್ ನಿಧನರಾದ ಸಂದರ್ಭದಲ್ಲಿ, ಅವರ ಸಾವಿಗೆ ಸಲ್ಮಾನ್ ಸಹ ಒಬ್ಬರು ಕಾರಣ ಎಂದು ಕೆಆರ್ಕೆ ಹೇಳಿದ್ದರು. ಅಷ್ಟೇ ಅಲ್ಲ, ಸಲ್ಮಾನ್ ಪರಮ ಭ್ರಷ್ಟ ಮತ್ತು ಬೀಯಿಂಗ್ ಹ್ಯೂಮನ್ ಬ್ರಾಂಡ್ ಮೂಲಕ ಸಾಕಷ್ಟು ಮೋಸ ಮಾಡಿದ್ದಾರೆ ಎಂದು ಹೇಳಿದ್ದರು. ಪ್ರಚಾರಕ್ಕೋಸ್ಕರ ಸಲ್ಮಾನ್ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಕೆಆರ್ಕೆ ಮಾಡುತ್ತಲೇ ಬಂದಿರುವುದರಿಂದ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಕೇಸು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಇದು ನಿಜವೇ ಆಗಿದ್ದರೆ, ಹಲವು ಪ್ರಶ್ನೆಗಳು ಉದ್ಭವಿಸುವುದು ಸಹಜ. ಏಕೆಂದರೆ, ಸಲ್ಮಾನ್ ವಿರುದ್ಧ ಕೆಆರ್ಕೆ ಹಲವು ಆರೋಪಗಳನ್ನು ಮಾಡಿ, ಒಂದು ವರ್ಷವಾಗುತ್ತಿದೆ. ಇಷ್ಟು ದಿನಗಳ ಕಾಲ ಸುಮ್ಮನೆ ಸುಮ್ಮನಿದ್ದ ಸಲ್ಮಾನ್, ಈಗ್ಯಾಕೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂಬ ಪ್ರಶ್ನೆ ಬಾಲಿವುಡ್ ಮಂದಿಯ ನಡುವೆ ಕೇಳಿಬರುತ್ತಿದೆ. ಈ ಪ್ರಶ್ನೆಗೆ ಸಲ್ಮಾನ್ ಯಾವಾಗ ಉತ್ತರಿಸುತ್ತಾರೋ?