

ಹೈದರಾಬಾದ್: ಟಾಲಿವುಡ್ನ ದಿಗ್ಗಜ ನಟ ನಂದಮೂರಿ ತಾರಕ ರಾಮರಾವ್ (ಎನ್ಟಿಆರ್) ಬಗ್ಗೆ ಹೆಚ್ಚು ಪರಿಚಯ ಮಾಡಿಕೊಡುವುದರ ಅವಶ್ಯಕತೆ ಇಲ್ಲ. ತೆಲುಗು ಚಿತ್ರರಂಗದಲ್ಲಿ ನಟ-ನಿರ್ದೇಶಕ-ನಿರ್ಮಾಪಕ-ಸಂಕಲನಕಾರರಾಗಿ ಗುರುತಿಸಿಕೊಂಡ ಎನ್ಟಿಆರ್ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ರಾಜಕೀಯದಲ್ಲೂ ಗುರುತಿಸಿಕೊಂಡು, ಆಂಧ್ರದ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು 'ಮೆಗಾ ಸ್ಟಾರ್' ಚಿರಂಜೀವಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಂದು ಎನ್ಟಿಆರ್ ಅವರ 98ನೇ ಹುಟ್ಟುಹಬ್ಬ. ಎನ್ಟಿಆರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಬಿಟ್ಟರೆ, ಮಿಕ್ಕಂತೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಶಸ್ತಿ ಬಂದಿಲ್ಲ. ಹಾಗಾಗಿ, ಖ್ಯಾತ ಗಾಯಕ ಭುಪೆನ್ ಹಜಾರಿಕ ಅವರಿಗೆ ಕೊಟ್ಟಂತೆ, ಎನ್ಟಿಆರ್ ಅವರಿಗೂ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಡಿ ಎಂದು ಚಿರಂಜೀವಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಖ್ಯಾತ ಗಾಯಕ ಭುಪೆನ್ ಹಜಾರಿಕಾ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅದೇ ತರಹ, ಎನ್ಟಿಆರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ತೆಲುಗು ಸಮುದಾಯದ ಪರವಾಗಿ ಕೇಳಿಕೊಳ್ಳುತ್ತೇನೆ. ಎನ್ಟಿಆರ್ ಅವರ ಶತಮಾನೋತ್ಸವ ಸಂದರ್ಭದಲ್ಲಿ, ಎನ್ಟಿಆರ್ ಅವರಿಗೆ ಮರಣೋತ್ತರ ಭಾರತ ರತ್ನ ಘೋಷಿಸುವ ಮೂಲಕ ದಿಗ್ಗಜ ನಟನಿಗೆ ಗೌರವ ಸಲ್ಲಿಸಬೇಕು' ಎಂದು ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಆಲಿಯಾ ಜಾಗೃತಿ; ಕರೊನಾ ಲಸಿಕೆ ಕುರಿತು ಸರಣಿ ನಿರ್ಮಾಣ
ಚಿರಂಜೀವಿ ಅವರ ಮನವಿಗೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೋ ಎಂದು ಕಾದು ನೋಡಬೇಕಿದೆ.