

ಕರೊನಾ ಲಸಿಕೆ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೊಂದಲವಿದೆ. ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಇನ್ನೂ ಒಂದಿಷ್ಟು ಜನ ಹೆದರುತ್ತಿದ್ದರೆ, ಹಾಕಿಸಿಕೊಳ್ಳುವವರಿಗೆ ಯಾವುದು ಸರಿ ಎಂಬ ಗೊಂದಲ ಕಾಡುತ್ತಿದೆ.
ಈ ಗೊಂದಲವನ್ನು ದೂರ ಮಾಡುವುದಕ್ಕೆಂದೇ, ಆಲಿಯಾ ಭಟ್ ಒಂದು ಕಾರ್ಯಕ್ರಮ ರೂಪಿಸಿದ್ದಾರೆ. ಐದು ಭಾಗಗಳ ಈ ಸರಣಿಯಲ್ಲಿ ಕರೊನಾ ಲಸಿಕೆಯ ಕುರಿತು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಲಿಯಾ ಈ ಕಾರ್ಯಕ್ರಮಕ್ಕೆ ‘ದಿ ಇಂಟರ್ಸೆಕ್ಷನ್: ವ್ಯಾಕ್ಸಿನೇಟ್ ಇಂಡಿಯಾ’ ಎಂಬ ಹೆಸರನ್ನಿಟ್ಟಿದ್ದಾರೆ. ಈ ಕಾರ್ಯಕ್ರಮವನ್ನು ನಡೆಸಿಕೊಡುವುದರ ಜತೆಗೆ, ತಮ್ಮ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯಿಂದ ಈ ಕಾರ್ಯಕ್ರಮವನ್ನು ನಿರ್ವಿುಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಕರೊನಾಗೆ ಲಸಿಕೆಗಳು ಬಂದಿದ್ದರೂ, ಹಲವರು ಇನ್ನೂ ಗೊಂದಲದಲ್ಲಿದ್ದಾರೆ. ಸುಳ್ಳುಸುದ್ದಿ, ಕಟ್ಟುಕಥೆಯಿಂದ ಲಸಿಕೆಗಳನ್ನು ನಂಬದ ಪರಿಸ್ಥಿತಿಯಲ್ಲಿದ್ದಾರೆ. ಈ ಸರಣಿ ಮೂಲಕ ಲಸಿಕೆ ತೆಗೆದುಕೊಳ್ಳುವುದು ಎಷ್ಟು ಸೂಕ್ತ ಎಂದು ಹೇಳುವ ಪ್ರಯತ್ನ ಮಾಡಲಾಗುತ್ತಿದೆ.
ಹಲವು ಜನಪ್ರಿಯ ವೈದ್ಯರು ಮತ್ತು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ. ಅಂದಹಾಗೆ, ಈ ಕಾರ್ಯಕ್ರಮ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗಲಿದೆ.