ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್​​ಗೆ 'ಕಬ್ಜ’ ಚಿತ್ರದ ಹಿಂದಿ ಅವತರಣಿಕೆ ಹಕ್ಕುಗಳು; ಹಿಂದಿ ಟೀಸರ್​ ಬಿಡುಗಡೆ

Kabzaa
Published on

ಮುಂಬೈ: ಉಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ತನ್ನದಾಗಿಸಿಕೊಂಡಿದ್ದು, ಮೊದಲ ಹಂತವಾಗಿ ಇಂದು ಹಿಂದಿ ಟೀಸರ್ ಬಿಡುಗಡೆ ಮಾಡಿದೆ.

ಆನಂದ್​ ಪಂಡಿತ್​, ಬಾಲಿವುಡ್​ನ ಜನಪ್ರಿಯ ನಿರ್ಮಾಪಕ ಮತ್ತು ವಿತರಕರಲ್ಲೊಬ್ಬರು. ಹಿಂದಿಯಲ್ಲಿ 'ಗ್ರೀಟ್​ ಗ್ರಾಂಡ್​ ಮಸ್ತಿ', 'ಸರ್ಕಾರ್​ 3', 'ಟೋಟಲ್​ ಧಮಾಲ್​', 'ಪಿಎಂ ನರೇಂದ್ರ ಮೋದಿ', 'ದಿ ಬಿಗ್​ ಬುಲ್​' ಮುಂತಾದ ಚಿತ್ರಗಳನ್ನು ನಿರ್ಮಿಸಿದವರು. ಇನ್ನು, ಅವರು ಹಲವು ಚಿತ್ರಗಳ ವಿತರಣೆ ಮತ್ತು ಬಿಡುಗಡೆ ಮಾಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಪ್ಯಾನ್​ ಇಂಡಿಯಾ ಚಿತ್ರವೊಂದನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವುದು ವಿಶೇಷ.

‘ಕಬ್ಜ’ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಕುರಿತು ಮಾತನಾಡಿರುವ ಆನಂದ್ ಪಂಡಿತ್, 'ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆಯಾಗಲಿದೆ ಎಂದು ನಮಗೆ ಸಂಪೂರ್ಣ ನಂಬಿಕೆಯಿದೆ' ಎಂದು ಹೇಳಿಕೊಂಡಿದ್ದಾರೆ.

‘ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಸಂಸ್ಥೆಯು ಕೈ ಜೋಡಿಸಿರುವುದು ನಮ್ಮ ಬದ್ಧತೆ ಮತ್ತು ಪ್ರಯತ್ನಕ್ಕೆ ಸಿಕ್ಕ ಮನ್ನಣೆ’ ಎನ್ನುವ ಆರ್. ಚಂದ್ರು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಿಸುವುದಾಗಿ ಹೇಳುತ್ತಾರೆ.

ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇದ್ದು, ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net