ಅನ್ನದಾತರಿಗೆ ಜಮೀನನ್ನೇ ಕೊಡಲು ಸಿದ್ಧರಾದ ನಟಿ ಜೂಹಿ ಚಾವ್ಲಾ!

3juhi_20chawla
Published on

ಕರೊನಾದಿಂದಾಗಿ ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಉದ್ಯೋಗ ಕಳೆದುಕೊಂಡು ಎಷ್ಟೋ ಜನ ನಿರ್ಗತಿಕರಾಗಿದ್ದಾರೆ. ಹೀಗಿರುವಾಗ ಬಾಲಿವುಡ್ ನಟಿ, ಪರಿಸರವಾದಿ ಜೂಹಿ ಚಾವ್ಲಾ ಒಂದೊಳ್ಳೇ ಕೆಲಸ ಮಾಡಿ ಎಲ್ಲರಿಂದ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದೇನೆಂದರೆ, ಜಮೀನಿಲ್ಲದ ರೈತರಿಗೆ ತಮ್ಮ ಜಮೀನು ನೀಡಿ, ಉಳುಮೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡುತ್ತಿದ್ದಾರೆ. ಆಸಕ್ತ ರೈತರನ್ನು ಮುಕ್ತವಾಗಿ ಜೂಹಿ ಆಹ್ವಾನಿಸಿದ್ದಾರೆ.

ಹೌದು, ಮುಂಬೈ ಹೊರವಲಯದಲ್ಲಿರುವ ಜಮೀನಿನಲ್ಲಿ ಈಗಾಗಲೇ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ತಂಡವೊಂದು ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಇದೀಗ ಅದೇ ಜಮೀನನ್ನು ಭೂಮಿ ಇಲ್ಲದ ರೈತರಿಗೆ ನೀಡಲಿದ್ದಾರೆ. ’ಸದ್ಯ ನಾವೆಲ್ಲ ಲಾಕ್​ಡೌನ್​ನಲ್ಲಿದ್ದೇವೆ. ಹಾಗಾಗಿ ನಮ್ಮ ಜಮೀನನ್ನು ಭೂಮಿ ಇರದ ರೈತರಿಗೆ ನೀಡಿ, ಬೆಳೆ ತೆಗೆಯಲು ಅವಕಾಶ ಮಾಡಿಕೊಡುತ್ತಿದ್ದೇನೆ. ಹಾಗೆ ಬೆಳೆದ ಬೆಳೆಯಲ್ಲಿ ರೈತನಿಗೂ ಪಾಲು ಸಿಗಲಿದೆ’ ಎಂದಿದ್ದಾರೆ.

ಸದ್ಯ ಉಳುಮೆಗೆ ಬರುವ ರೈತರಿಗೆ ಮನೆ ಮತ್ತು ಊಟದ ವ್ಯವಸ್ಥೆಯನ್ನೂ ಮಾಡಿಕೊಡುವ ಬಗ್ಗೆ ಜೂಹಿ ಹೇಳಿಕೊಂಡಿದ್ದಾರೆ. ಇನ್ನು ಈ ಥರ ಭೂಮಿ ನೀಡುವುದು ಹೊಸ ಪದ್ಧತಿಯೇನಲ್ಲ. ಮೊದಲಿನಿಂದಲೂ ಗುತ್ತಿಗೆ ಮತ್ತು ಲಾವಣಿ ಹೆಸರಿನಲ್ಲಿ ನಡೆದುಕೊಂಡು ಬಂದಿದೆ. ಹಳ್ಳಿಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಆದರೆ, ರೈತರನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಸಹಾಯಕ್ಕೆ ಮುಂದಾಗಿರುವ ಜೂಹಿ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net