

ಪಾತಾಳ್ ಲೋಕ್ ವೆಬ್ಸಿರೀಸ್ ಸದ್ಯ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಒಂದಷ್ಟು ಮಂದಿ ಸಿರೀಸ್ ಮೂಡಿ ಬಂದ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಬ್ಯಾನ್ ಮಾಡುವಂತೆಯೂ ಹೇಳಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದೀಗ ಈ ವೆಬ್ ಸರಣಿಯನ್ನು ನಿರ್ಮಾಣ ಮಾಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿರುದ್ಧ ದೂರು ನೀಡಲಾಗಿದೆ.
ಇದನ್ನೂ ಓದಿ: ಕರೊನಾ ವಿರುದ್ಧ ದನಿಗೂಡಿಸಿದ ನಮ್ಮೂರಿನ ತಾರೆಯರು …
ವೆಬ್ ಸರಣಿಯಲ್ಲಿ ತಮ್ಮ ಸಮುದಾಯದ ವಿರುದ್ಧ ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ ಅರುಣಾಚಲಪ್ರದೇಶ ಗೋರ್ಖಾ ಯೂಥ್ ಅಸೋಸಿಯೇಷನ್ ಕಳೆದ ಸೋಮವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿತ್ತು. ಸರಣಿಯಲ್ಲಿ ತ್ರಿಲಿಂಗಿಯೊಬ್ಬರನ್ನು ಕೆಟ್ಟದಾಗಿ ಬಳಸಿಕೊಂಡಿದ್ದು, ‘ಸೆಕ್ಸೆಯೆಸ್ಟ್ ಸ್ಲರ್’ ಎಂಬ ಪದ ಬಳಕೆ ಮಾಡಿ ಸಮುದಾಯಕ್ಕೆ ಮಸಿ ಬಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ರಂಜಾನ್ ಹಬ್ಬಕ್ಕೆ ರಾಬರ್ಟ್ ಕಡೆಯಿಂದ ಈ ಉಡುಗೊರೆ!
ಇದಕ್ಕೂ ಮುನ್ನ ಭಾರತೀಯ ಗೋರ್ಖಾ ಯುವ ಪರಿಸಂಘ ಈ ಸಂಬಂಧ ಆನ್ಲೈನ್ ಅಭಿಯಾನ ಆರಂಭಿಸಿದ್ದು, ಆ ಪದವನ್ನು ಮ್ಯೂಟ್ ಮಾಡಿ ಸಬ್ಟೈಟಲ್ನಲ್ಲೂ ಬದಲಾವಣೆ ಮಾಡುವಂತೆ ಆಗ್ರಹಿಸಿದೆ. ಅಷ್ಟೇ ಅಲ್ಲ ಆ ಪಾತ್ರದ ಹಿನ್ನೆಲೆಯನ್ನು ಮೇಘಾಲಯಕ್ಕೆ ಹೋಲಿಸಿ, ಅಲ್ಲಿನ ಖಾಸಿ ಸಮುದಾಯದ ಹೆಣ್ಣೆಂದು ಬಿಂಬಿಸಲಾಗಿದೆ. ಅದೆಲ್ಲವನ್ನೂ ಕಿತ್ತೆಸೆಯಬೇಕು ಎಂದು ಒತ್ತಾಯಿಸಿದ್ದಾರೆ. ಸೀಮಿತ ಸಮುದಾಯವೊಂದಕ್ಕೆ ಈ ರೀತಿ ಪಟ್ಟ ಕಟ್ಟುವುದು ಸರಿಯಲ್ಲ ಎಂದು ಹೇಳಿ, ಅನುಷ್ಕಾ ಶರ್ಮಾ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೂ ನಾವು ಸಿದ್ಧ ಎಂದು ಗೋರ್ಖಾ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇತ್ತ ಇದ್ಯಾವುದಕ್ಕೂ ಸ್ಪಂದಿಸದ ಅನುಷ್ಕಾ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಕಾದು ನೋಡಬೇಕು. (ಏಜೆನ್ಸೀಸ್)