

ಬೆಂಗಳೂರು: ಕಳೆದೊಂದು ತಿಂಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ತಂಡದಿಂದ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಮಾಹಿತಿ ಲಭ್ಯವಾಗಿಲ್ಲ. ಇದೀಗ ರಂಜಾನ್ ಪ್ರಯುಕ್ತ ಅಭಿಮಾನಿಗಳಿಗೆ ಉಡುಗೊರೆಯೊಂದನ್ನು ಹೊತ್ತು ಬಂದಿದ್ದಾರೆ ನಿರ್ದೇಶಕ ತರುಣ್ ಕಿಶೋರ್.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ನಿರ್ಮಿಸಿದ ತಾರಕ್!
ಹೌದು, ಕಳೆದ ವರ್ಷದ ರಂಜಾನ್ಗೆ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಈ ಸಲದ ರಂಜಾನ್ ಹಬ್ಬದ ಪ್ರಯುಕ್ತ (ಮೇ 24) ಮತ್ತೊಂದು ಪೋಸ್ಟರ್ ಮೂಲಕ ಆಗಮಿಸಲು ಸಜ್ಜಾಗಿದ್ದು. ಈ ವಿಚಾರವನ್ನು ನಿರ್ದೇಶಕ ತರುಣ್ ಕಿಶೋರ್ ಹೇಳಿಕೊಂಡಿದ್ದಾರೆ. ಈ ಸುದ್ದಿ ದರ್ಶನ್ ಅಭಿಮಾನಿಗಳಲ್ಲಿ ಖುಷಿಯ ಜತೆಗೆ ಕುತೂಹಲ ಕೆರಳಿಸಿದ್ದು, ಸಿನಿಮಾಗಾಗಿ ಕಾಯುತ್ತಿದ್ದಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ರಾಬರ್ಟ್’ ಸಿನಿಮಾ ಏ. 9ಕ್ಕೆ ತೆರೆಕಾಣಬೇಕಿತ್ತು. ಕರೊನಾ ಹಾವಳಿಯಿಂದಾಗಿ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿತ್ತು. ಚಿತ್ರತಂಡದ ಈ ನಿರ್ಧಾರಕ್ಕೆ ಅಭಿಮಾನಿಗಳೂ ಖುಷ್ ಆದರು. ಆದರೆ, ಇನ್ನೊಂದು ಕಡೆ ಅಷ್ಟೇ ಬೇಸರವೂ ಆಗಿತ್ತು. ಮತ್ತೊಂದು ಟೀಸರ್ ಅಥವಾ ಹಾಡನ್ನು ಬಿಡುವಂತೆ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದರು. ಅದರಂತೆ ಏ.2ರ ರಾಮನವಮಿ ಪ್ರಯುಕ್ತ ಜೈ ಶ್ರೀರಾಮ್ ಹಾಡಿನ ಹೊಸ ವರ್ಷನ್ ಬಿಡುಗಡೆ ಮಾಡಿದ್ದರು ನಿರ್ದೇಶಕರು.