ಧ್ರುವ ಯಾವುದಕ್ಕೆ ಹೆದರ್ತಾರೆ? ಹರಿಪ್ರಿಯಾ ಹೇಳ್ತಾರೆ ಕೇಳಿ ...

Dhruva - Haripriya Final
Published on

‘ನನಗೆ ಜಿರಳೆ ಕಂಡರೆ ಸಿಕ್ಕಾಪಟ್ಟೆ ಭಯ ...’ ಅಂತ ಹರಿಪ್ರಿಯಾ ಕೆಲವೇ ದಿನಗಳ ಹಿಂದೆ, ತಮ್ಮ ಬೇಬ್‌ನೋಸ್ ಡಾಟ್‌ಕಾಮ್‌ನಲ್ಲಿ ಬರೆದುಕೊಂಡಿದ್ದು ನೆನಪಿದೆ ತಾನೆ? ಈಗ ಅವರು ಧ್ರುವ ಸರ್ಜಾಗೆ ಯಾವುದರ ಬಗ್ಗೆ ಭಯ ಎಂದು ಹೊಸ ಲೇಖನದಲ್ಲಿ ವಿವರಿಸಿದ್ದಾರೆ.

ಹರಿಪ್ರಿಯಾ, ‘ಎತ್ತರ ಧ್ರುವದಿಂ’ ಎಂಬ ಹೊಸ ಪೋಸ್ಟ್ ಹಾಕಿದ್ದಾರೆ. ಇಲ್ಲಿ ತಮ್ಮ ಮತ್ತು ಧ್ರುವ ಸರ್ಜಾ ಅವರ ಗೆಳೆತನದ ಕುರಿತಾಗಿ ಹಲವು ವಿಷಯಗಳನ್ನು ಬರೆದಿದ್ದಾರೆ. ಧ್ರುವ ಮತ್ತು ಹರಿಪ್ರಿಯಾ ಇಬ್ಬರೂ, ‘ಭರ್ಜರಿ’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಆ ನಂತರ, ಯಾವಾಗಲಾದರೊಮ್ಮೆ ಚಾಟ್ ಮಾಡುತ್ತಿದ್ದು ಉಂಟಂತೆ. ಇತ್ತೀಚೆಗೆ ಲಾಕ್‌ಡೌನ್ ಸಮಯದಲ್ಲಿ ಒಮ್ಮೆ ಫೋನ್ ಮಾಡಿ ಮಾತನಾಡಿದರಂತೆ. ಒಂದಿಷ್ಟು ಉಭಯ ಕುಶಲೋಪರಿ ನಡೆಸಿದರಂತೆ.

ಅದನ್ನೆಲ್ಲಾ ವಿವರವಾಗಿ ಬರೆದಿರುವ ಹರಿಪ್ರಿಯಾ, ಕೊನೆಯಲ್ಲಿ ಒಂದು ಸ್ವಾರಸ್ಯಕರ ಘಟನೆಯೊಂದನ್ನು ಬರೆದಿದ್ದಾರೆ.

‘ಒಂದು ಸೀಕ್ರೆಟ್ ಹೇಳ್ಲಾ? ನನಗೆ ಹೇಗೆ ಜಿರಳೆ ಅಂದ್ರೆ ಭಯವೋ, ಹಾಗೆಯೇ ಧ್ರುವಗೆ ಹೈಟ್ಸ್ ಅಂದರೆ ಭಯ. ಸ್ಲೊವೇನಿಯಾದಲ್ಲಿ ನಮ್ಮ ಹರ್ಷ ಮಾಸ್ಟರ್ ನಮ್ಮನ್ನ ಫೋರ್ಟ್ ಮೇಲೆ ಅಥವಾ ಎಡ್ಜ್‌ನಲ್ಲಿ ನಿಲ್ಲಿಸಿ ಶೂಟ್ ಮಾಡಿದ್ರು (ಶಾಟ್ ಬ್ಯೂಟಿಗೆ). ನಾನು ಓಕೆ. ಆದರೆ, ನಮ್ ಹೀರೋ ನಾಟ್ ಓಕೆ. ನಾನ್ ತುಂಬಾ ನಗ್ತಿದ್ದೆ. ಐ ಫೆಲ್ಟ್ ವೆರಿ ಕ್ಯೂಟ್. ಇದನ್ನೆಲ್ಲಾ ನೆನಪಿಸಿಕೊಂಡು ರೇಗಿಸ್ತಿದ್ದೆ ...’ ಎಂದು ಬರೆದಿದ್ದಾರೆ ಹರಿಪ್ರಿಯಾ.

ಫೋನ್‌ನಲ್ಲಿ ಧ್ರುವ ಜತೆಗೆ ಮಾತನಾಡುವಾಗ, ಈ ವಿಷಯದ ಬಗ್ಗೆ ರೇಗಿಸಿದಾಗ, ‘ರ‌್ರೀ, ನಾನು ಬಾಡಿ ಬಿಲ್ಡ್ ಮಾಡಿದ್ದೀನಿ. ಈಗ ಧೈರ್ಯ ಬಂದಿರ್ಬೋದು ...’ ಎಂದು ಧ್ರುವ ಉತ್ತರ ಕೊಟ್ಟರಂತೆ. ಅದಕ್ಕೆ ಹರಿಪ್ರಿಯಾ, ‘ಓಹ್ ಹೌದಾ! ಹಾಗಾದ್ರೆ ಚೆಕ್ ಮಾಡೋಣ್ವಾ? ಹೇಗಿದ್ರೂ ಪ್ರೇರಣಾ ವೀಕೆಂಡ್ ಫ್ರೀ ಇರ್ತಾರೆ, ನಂದಿ ಹಿಲ್ಸ್‌ಗೆ ಹೋಗೋಣ್ವಾ’ ಎಂದರಂತೆ. ಅದಕ್ಕೆ ಧ್ರುವ, ‘ಬೇಡ ಬೇಡ’ ಎಂದರಂತೆ. ಹೀಗೆ ತುಂಬಾ ಹೊತ್ತು ನಗ್ತಾ ನಗ್ತಾ ಮಾತಾಡಿದೆವು ಎಂದು ಬರೆದುಕೊಂಡಿದ್ದಾರೆ ಹರಿಪ್ರಿಯಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net