ಇನ್ಮುಂದೆ ನನ್ನನ್ನು ಆ ರೀತಿ ಕರೆಯಬೇಡಿ...ಸಂಕ್ರಾಂತಿಯಂದೇ ಮಹತ್ವದ ಘೋಷಣೆ ಮಾಡಿದ ಜಯಂ ರವಿ! Jayam Ravi

Jayam Ravi
Published on

Jayam Ravi : ತಮಿಳು ಚಿತ್ರರಂಗದಲ್ಲಿ ಬಾಲನಟನಾಗಿ ಪಾದರ್ಪಣೆ ಮಾಡಿ ನಂತರ ಹೀರೋ ಆದವರಲ್ಲಿ ಜಯಂ ರವಿ ಕೂಡ ಒಬ್ಬರು. ಹೀರೋ ಮಾತ್ರವಲ್ಲ ಇಂದು ಸ್ಟಾರ್​ ನಟರಲ್ಲಿ ಕೂಡ ಒಬ್ಬರು. 1989ರಲ್ಲಿ ಒರು ತೊಟ್ಟಿಲ್ ಸಬಥಮ್ ಚಿತ್ರದಲ್ಲಿ ಬಾಲನಟನಾಗಿ ಪಾದರ್ಪಣೆ ಮಾಡಿದರು, ನಂತರ ಎರಡು ತೆಲುಗು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದರು.

ಕಾಲೇಜು ಶಿಕ್ಷಣವನ್ನು ಮುಗಿಸಿದ ನಂತರ, ತಮ್ಮ ಸಹೋದರ ಮೋಹನ್ ರಾಜ ನಿರ್ದೇಶನದ 2003ರಲ್ಲಿ ತೆರೆಕಂಡ ಜಯಂ ಚಿತ್ರದಲ್ಲಿ ನಾಯಕನಾಗಿ ಪಾದರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ಎಲ್ಲರ ಮೆಚ್ಚುಗೆ ಗಳಿಸಿದರು. ಈ ಸಿನಿಮಾದಿಂದ ಜಯಂ ರವಿ ಎಂಬ ಹೆಸರು ಖಾಯಂ ಆಯಿತು. ಬಳಿಕ 2004ರಲ್ಲಿ ಜಯಂ ರವಿ ಹಾಗೂ ಮೋಹನ್ ರಾಜ ಕಾಂಬೋ ಚಿತ್ರ ‘ಎಂ ಕುಮಾರನ್ ಸನ್ ಆಫ್ ಮಹಾಲಕ್ಷ್ಮಿ’ ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಯಶಸ್ಸನ್ನು ದಾಖಲಿಸಿತು. ಇದರ ಬೆನ್ನಲ್ಲೇ ದಾಸ್, ರಾಮಿ, ಇರಿಟಾ ತಿರುದನ್, ತೋಕ್ಕು ಮತ್ತು ಮನಂ, ದೀಪಾವಳಿ, ಸಂತೋಷ್ ಸುಬ್ರಮಣ್ಯಂ, ಧಾಮ್ ಧೂಮ್ ಹೀಗೆ ವೈವಿಧ್ಯಮಯ ಪಾತ್ರಗಳಲ್ಲಿ ಜಯಂ ರವಿ ನಟಿಸಿದರು. ಅವರು ನಟಿಸಿದ ಬಹುತೇಕ ಚಿತ್ರಗಳು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ.

ಜಯಂ ರವಿ ಅವರು ಇದುವರೆಗೂ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ ನಟನೆಯ "ಕಾದಲಿಕ್ಕ ನೇರಮಿಲೈ" ಸಿನಿಮಾ ಇಂದು ಬಿಡುಗಡೆಯಾಗಿದೆ. ಕೃತಿಕಾ ಉದಯನಿಧಿ ನಿರ್ದೇಶನದ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಹೆಚ್ಚಿವೆ. ನಟಿ ನಿತ್ಯಾ ಮೆನನ್​ ನಾಯಕಿಯಾಗಿ ನಟಿಸಿದ್ದಾರೆ.

ಸಿನಿಮಾ ಬಿಡುಗಡೆಗೂ ಮುಂಚೆಯೇ ಜಯಂ ರವಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಅದೇನೆಂದರೆ, ತಮ್ಮ ಹೆಸರನ್ನು ರವಿಮೋಹನ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಜಯಂ ರವಿ ತಿಳಿಸಿದ್ದಾರೆ. ಈ ಹೊಸ ವರ್ಷದಲ್ಲಿ ನಾನು ನನ್ನ ಜೀವನದಲ್ಲಿ ಹೊಸ ವಿಷಯಗಳನ್ನು ಪ್ರಾರಂಭಿಸುತ್ತಿದ್ದು, ನಾನದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಸಿನಿಮಾ ನನ್ನ ಉತ್ಸಾಹ. ಅದೇ ನನ್ನನ್ನು ಇಲ್ಲಿ ಉಳಿಸಿಕೊಂಡಿದೆ ಮತ್ತು ನೀವೆಲ್ಲ ನನಗೆ ಸಾಕಷ್ಟು ಬೆಂಬಲವನ್ನು ನೀಡಿದ್ದೀರಿ. ಇಂದಿನಿಂದ, ಎಲ್ಲರೂ ನನ್ನನ್ನು ರವಿ ಅಥವಾ ರವಿ ಮೋಹನ್ ಎಂದು ಕರೆಯಬೇಕು. ಇನ್ನು ಮುಂದೆ ನನ್ನನ್ನು ಜಯಂ ರವಿ ಎಂದು ಕರೆಯಬೇಡಿ, ಇದು ನನ್ನ ಮನವಿ ಎಂದು ಹೇಳಿದ್ದಾರೆ.

ನಾನು ರವಿ ಮೋಹನ್ ಸ್ಟುಡಿಯೋವನ್ನು ಸ್ಥಾಪಿಸಿದ್ದೇನೆ ಮತ್ತು ಸಿನಿಮಾಗಳ ರೂಪದಲ್ಲಿ ಹೊಸ ಕತೆಗಳನ್ನು ಹೊತ್ತು ನಿಮ್ಮ ಮುಂದೆ ತರುತ್ತೇನೆ. ಅಲ್ಲದೆ, ನನ್ನ ಅಭಿಮಾನಿಗಳಿಗೆ ನಾನು ನೀಡುವ ಸಂದೇಶವೆಂದರೆ ನನ್ನ ಎಲ್ಲ ಅಭಿಮಾನಿ ಸಂಘಗಳನ್ನು ರವಿ ಮೋಹನ್ ಫ್ಯಾನ್ಸ್ ಫೌಂಡೇಶನ್ ಎಂಬ ಸಂಸ್ಥೆಯಲ್ಲಿ ವಿಲೀನಗೊಳಿಸುತ್ತಿದ್ದೇನೆ. ಅದರ ಮೂಲಕ ನಾನು ಸೇವಾ ಮತ್ತು ಸಹಾಯ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇನೆ ಮತ್ತು ಸಮಾಜದಲ್ಲಿ ಒಳ್ಳೆಯತನವನ್ನು ಉತ್ತೇಜಿಸುತ್ತೇನೆ ಎಂದು ರವಿ ಮೋಹನ್​ (ಜಯಂ ರವಿ) ತಿಳಿಸಿದ್ದಾರೆ.

ಈ ಹೊಸ ಪ್ರಯಾಣದಲ್ಲಿ ನೀವೆಲ್ಲರೂ ನನ್ನನ್ನು ಬೆಂಬಲಿಸಬೇಕೆಂದು ನಾನು ವಿನಂತಿಸುತ್ತೇನೆ. 'ರವಿ ಮೋಹನ್ ಸ್ಟುಡಿಯೋಸ್' ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಪ್ರಪಂಚದಾದ್ಯಂತದ ಸಿನಿ ಅಭಿಮಾನಿಗಳು ಸಂಭ್ರಮಿಸುವ ಸಿನಿಮಾಗಳನ್ನು ನಿಮ್ಮ ಮುಂದೆ ತರುವ ಗುರಿಯೊಂದಿಗೆ ಈ ಕಂಪನಿಯನ್ನು ಪ್ರಾರಂಭಿಸಲಾಗಿದೆ. ಈ ಕಂಪನಿಯು ಪ್ರತಿಭೆ ಮತ್ತು ಉತ್ತಮ ಕತೆಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಅರ್ಥಪೂರ್ಣ ಕತೆಗಳನ್ನು ಪರದೆಯ ಮೇಲೆ ತರುವಲ್ಲಿ ಪ್ರಯತ್ನಿಸುತ್ತದೆ. ತಮಿಳು ಜನರ ಆಶೀರ್ವಾದದೊಂದಿಗೆ, ನನ್ನ ಅಭಿಮಾನಿಗಳು, ಮಾಧ್ಯಮಗಳು ಮತ್ತು ಎಲ್ಲರೂ ಈ ಹೊಸ ಪ್ರಯತ್ನಕ್ಕೆ ಬೆಂಬಲವನ್ನು ನೀಡಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ನಿಮ್ಮ ಪ್ರೋತ್ಸಾಹ ಯಾವಾಗಲೂ ನನಗೆ ದೊಡ್ಡ ಸ್ಫೂರ್ತಿಯಾಗಿದೆ. ಈ ಹೊಸ ಪ್ರಯಾಣದಲ್ಲಿ ನಿಮ್ಮ ಬೆಂಬಲವನ್ನು ನಾನು ಎದುರು ನೋಡುತ್ತಿದ್ದೇನೆ. ಎಲ್ಲರಿಗೂ ಪೊಂಗಲ್ ಶುಭಾಶಯಗಳು ಎಂದು ರವಿ ಮೋಹನ್​ ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net