

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡುತ್ತಿರುವ ಲಾಲ್ ಸಲಾಂ ಸಿನಿಮಾದಲ್ಲಿ ರಜನಿಕಾಂತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತೊಂದು ಬ್ರೇಕಿಂಗ್ ಸುದ್ದಿ ಚಿತ್ರತಂಡದಿಂದ ಹೊರಬಿದ್ದಿದೆ. ಅದೇನೆಂದರೆ, ರಜನಿಕಾಂತ್ ಜತೆ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಕೂಡ ಲಾಲ್ ಸಲಾಂ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಕುರಿತು ರಜನಿಕಾಂತ್ ಅವರು ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ. ಚೊಚ್ಚಲ ಕ್ರಿಕೆಟ್ ವಿಶ್ವಕಪ್ ಗೆದ್ದು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ದಿಗ್ಗಜ, ಅತ್ಯಂತ ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿತ್ವವುಳ್ಳ ಕಪಿಲ್ ದೇವ್‌ಜಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಒದಗಿ ಬಂದ ಗೌರವವಾಗಿದೆ ಎಂದು ರಜಿನಿಕಾಂತ್ ಟ್ವೀಟ್ ಮಾಡಿದ್ದು, ಮುಂಬೈನ ಲಾಲ್ ಸಲಾಂ ಸಿನಿಮಾ ಸೆಟ್ನಲ್ಲಿ ಇಬ್ಬರು ಉಭಯ ಕುಶಲೋಪರಿ ನಡೆಸುತ್ತಿರುವ ಫೋಟೋವನ್ನು ರಜನಿ ಪೋಸ್ಟ್ ಮಾಡಿದ್ದಾರೆ.
ಲಾಲ್ ಸಲಾಂ ಸಿನಿಮಾ ಶೂಟಿಂಗ್ಗಾಗಿ ಆ ವಾರದ ಆರಂಭದಲ್ಲೇ ರಜಿನಿಕಾಂತ್ ಮುಂಬೈ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಈ ಸಿನಿಮಾದಲ್ಲಿ ಕಪಿಲ್ ದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಿಗೆ ಈ ಸುದ್ದಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಜನಿಕಾಂತ್ ಅವರು ಮೋಯಿದ್ದೀನ್ ಭಾಯ್ ಹೆಸರಿನ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರತಂಡ ರಜನಿಕಾಂತ್ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ.
ಅಂದಹಾಗೆ ಈ ಸಿನಿಮಾವನ್ನು ಐಶ್ವರ್ಯಾ ರಜನಿಕಾಂತ್ ಅವರು ನಿರ್ದೇಶನ ಮಾಡುತ್ತಿದ್ದು, ಲೈಕಾ ಪ್ರೊಡಕ್ಷನ್ಸ್ನಡಿ ಸುಭಾಸ್ಕರನ್ ನಿರ್ಮಾಣ ಮಾಡಿದರೆ, ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಸಂತೋಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕಥೆ ಏನು, ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ಮಾಹಿತಿಗಳು ಸದ್ಯಕ್ಕೆ ಇಲ್ಲ. ಆದರೆ, ರಜಿನಿಕಾಂತ್ ಫಸ್ಟ್ ಲುಕ್ ಪೋಸ್ಟರ್ ನೋಡಿದರೆ, ಇದೊಂದು ಗಲಭೆ ಕುರಿತಾದ ಚಿತ್ರ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಕ್ರಿಕೆಟ್ ಒಂದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಸಹ ಪೋಸ್ಟರ್ ಸೂಚಿಸಿದೆ. ಈ ವರ್ಷದ ಅಂತ್ಯದಲ್ಲಿ ಚಿತ್ರ ತೆರೆಗೆ ಬರಲಿದೆ. (ಏಜೆನ್ಸೀಸ್)