More

    ಜರ್ಸಿ ನಂ. 18, ಮೇ 18 ಮತ್ತು ಶತಕ: 18ನೇ ಸಂಖ್ಯೆ ಹಿಂದಿನ ರಹಸ್ಯ ಬಿಚ್ಚಿಟ್ಟ ಕಿಂಗ್​ ಕೊಹ್ಲಿ!

    ನವದೆಹಲಿ: ನಿನ್ನೆ (ಮೇ 18) ನಡೆದ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್ (ಎಸ್​ಆರ್​ಎಚ್​)​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ಲೇ ಆಫ್​ ಆಸೆಯನ್ನು ಇನ್ನು ಜೀವಂತವಾಗಿ ಇರಿಸಿಕೊಂಡಿದೆ. ನಿನ್ನೆಯ ಪಂದ್ಯದಲ್ಲಿ ವಿರಾಟ್​ ಕೊಹ್ಲಿಯೇ ಎಲ್ಲರ ಆಕರ್ಷಣೆ ಆಗಿದ್ದರು. ಅದಕ್ಕೆ ಕಾರಣ ಅವರ ಅಮೋಘ ಬ್ಯಾಟಿಂಗ್​. ನಿರ್ಣಾಯಕ ಘಟ್ಟದಲ್ಲಿ ವಿರಾಟ್​ ಬ್ಯಾಟ್​ನಿಂದ ಸಿಡಿದ ಶತಕ ಅಸಂಖ್ಯಾತ ಅಭಿಮಾನಿಗಳ ಮನಸ್ಸಿಗೆ ಅಪಾರ ಸಂತೋಷವನ್ನು ಉಂಟುಮಾಡಿರುವುದರಲ್ಲಿ ಎರಡು ಮಾತೇ ಇಲ್ಲ.

    ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ಪಂದ್ಯ

    ನಿನ್ನೆ ನಡೆದ ಪಂದ್ಯವು ವಿರಾಟ್​ ಕೊಹ್ಲಿ ವಿಚಾರದಲ್ಲಿ ವಿಶೇಷ ಕ್ಷಣವೊಂದಕ್ಕೆ ಸಾಕ್ಷಿಯಾದೆ. ಅದೇನೆಂದರೆ, ನಿನ್ನೆಯ ತಾರೀಖು ಮೇ 18 ಮತ್ತು ಕೊಹ್ಲಿ ಅವರ ಜರ್ಸಿ ನಂಬರ್​ ಕೂಡ 18 ಆಗಿದ್ದು, ಅದೇ ದಿನ ಶತಕ ಬಾರಿಸಿರುವುದು ಕೊಹ್ಲಿ ಅವರಿಗೆ 18ನೇ ನಂಬರ್​ ಲಕ್ಕಿ ಎಂದು ಹೇಳಲಾಗಿದೆ. ಅಲ್ಲದೆ, ಕೊಹ್ಲಿ ಅವರು ಕೂಡ 18ನೇ ನಂಬರ್​ ತಮ್ಮ ಜೀವನದಲ್ಲಿ ಎಷ್ಟು ಮುಖ್ಯವಾಗಿದೆ ಎಂಬುದನ್ನು ವಿವರಿಸಿದ್ದಾರೆ.

    ಕಾಸ್ಮಿಕ್​ ಕನೆಕ್ಷನ್​

    ಆರಂಭದಲ್ಲಿ ನನಗೆ ಸಾಮಾನ್ಯವಾಗಿಯೇ 18ನೇ ಜರ್ಸಿ ನಂಬರ್​ ಕೊಡಲಾಯಿತು. ಆದರೆ, ವರ್ಷಗಳ ಉರುಳಿದಂತೆ 18ನೇ ನಂಬರ್​ ನನ್ನ ಜೀವನದಲ್ಲಿ ಕಾಸ್ಮಿಕ್​ ಕನೆಕ್ಷನ್​ (ಬ್ರಹ್ಮಾಂಡದಿಂದ ಮಾರ್ಗದರ್ಶಿಸಲ್ಪಟ್ಟ ಇನ್ನೊಬ್ಬ ವ್ಯಕ್ತಿಯೊಂದಿಗೆ ನಾವು ಬೆಳೆಸುವ ಸಂಪರ್ಕ) ಆಗಿ ಬದಲಾಯಿತು ಎಂದು ಕೊಹ್ಲಿ ಹೇಳಿದ್ದಾರೆ.

    ಜೀವನದಲ್ಲಿ ತುಂಬಾ ಮುಖ್ಯವಾಯಿತು

    ನಿಜ ಹೇಳಬೇಕೆಂದರೆ ನಾನು 19 ವರ್ಷ ಒಳಗಿನ ವಿಶ್ವಕಪ್​ ಆಡುವಾಗ 18ನೇ ನಂಬರ್​ ಜರ್ಸಿಯನ್ನು ಸಾಮಾನ್ಯವಾಗಿಯೇ ನನಗೆ ನೀಡಲಾಯಿತು. ಆದರೆ, ದಿನಗಳು ಕಳೆದಂತೆ ಆ ನಂಬರ್​ ನನ್ನ ಜೀವನದಲ್ಲಿ ತುಂಬಾ ಮುಖ್ಯವಾಯಿತು. ನಾನು ಆಗಸ್ಟ್​ 18ರಂದು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದೆ. ನನ್ನ ತಂದೆ 2006ರ ಡಿಸೆಂಬರ್​ 18ರಂದು ಮೃತಪಟ್ಟರು. ಈ ಎರಡು ಮಹತ್ವದ ಕ್ಷಣಗಳು 18ರಂದೇ ನಡೆಯಿತು. ಈ ದಿನಾಂಕದೊಂದಿಗೆ ಬ್ರಹ್ಮಾಂಡದ ಸಂಪರ್ಕವಿದೆ ಎಂದು ನನಗೆ ತೋರುತ್ತದೆ ಎಂದು ಕೊಹ್ಲಿ ಹೇಳಿರುವ ವಿಡಿಯೋವನ್ನು ಸ್ಟಾರ್​ ಸ್ಪೋರ್ಟ್ಸ್​ ಅಪ್​ಲೋಡ್​ ಮಾಡಿದೆ.

    ಇದೊಂದು ರೀತಿಯ ಆಶೀರ್ವಾದ

    18ನೇ ನಂಬರ್​ ಇರುವ ಜರ್ಸಿಯನ್ನು ಹಾಕಿಕೊಂಡು ಅಭಿಮಾನಿಗಳು ತೋರುವ ಪ್ರೀತಿಯ ಬಗ್ಗೆ ಮಾತನಾಡಿರುವ ಕೊಹ್ಲಿ, ನಿಜಕ್ಕೂ ಇದೊಂದು ರೀತಿಯ ಆಶೀರ್ವಾದ ಎಂದು ಹೇಳಿಕೊಂಡಿದ್ದಾರೆ. ನಾವು ಮೈದಾನಕ್ಕೆ ಹೋದಾಗ ನನ್ನ ಜರ್ಸಿ ಸಂಖ್ಯೆ ಮತ್ತು ಹೆಸರನ್ನು ಧರಿಸಿರುವ ಜನರನ್ನು ನೋಡಿದಾಗ ನಾನದನ್ನು ಅತಿವಾಸ್ತವಿಕವಾಗಿ ಕಾಣುತ್ತೇನೆ. ಏಕೆಂದರೆ ಬಾಲ್ಯದಲ್ಲಿ ನಾನು ನನ್ನ ವೀರರ ಜರ್ಸಿಯನ್ನು ಧರಿಸಲು ಬಯಸಿದ್ದೆ. ಇದೀಗ ಕ್ಷಣವನ್ನು ನಾನು ಅನುಭವಿಸುತ್ತಿದ್ದೇನೆ. ಇದು ದೇವರು ನೀಡಿದ ಉತ್ತಮ ಅವಕಾಶ ಎಂದು ಹೇಳಿದರು.

    ಆರ್​ಸಿಬಿಗೆ ಭರ್ಜರಿ ಜಯ

    ಪಂದ್ಯದ ವಿಚಾರಕ್ಕೆ ಬರುವುದಾದರೆ, ಹೈದರಾಬಾದ್​ನ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (100 ರನ್​, 63 ಎಸೆತ,12 ಬೌಂಡರಿ, 4 ಸಿಕ್ಸರ್​) ವಿಶ್ವದ ಶ್ರೀಮಂತ ಟಿ20 ಲೀಗ್​ನಲ್ಲಿ 4 ವರ್ಷಗಳ ಬಳಿಕ ಸಿಡಿಸಿದ ಆಕರ್ಷಕ ಶತಕ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್​ (71 ರನ್​, 47 ಎಸೆತ, 7 ಬೌಂಡರಿ, 2 ಸಿಕ್ಸರ್​) ಜತೆಗಿನ ಭರ್ಜರಿ ಜತೆಯಾಟದ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​-16ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಎದುರು 8 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಫಾಫ್​ ಡು ಪ್ಲೆಸಿಸ್​ ಬಳಗ ಪ್ಲೇಆಫ್​​ ಅವಕಾಶ ವೃದ್ಧಿಸಿಕೊಂಡಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಸನ್​ರೈಸರ್ಸ್​ ತಂಡ ವಿಕೆಟ್​ ಕೀಪರ್​&ಬ್ಯಾಟರ್​ ಹೆನ್ರಿಕ್​ ಕ್ಲಾಸೆನ್​ (104 ರನ್​, 51 ಎಸೆತ, 8 ಬೌಂಡರಿ, 6 ಸಿಕ್ಸರ್​) ಶತಕದ ನೆರವಿನಿಂದ 5 ವಿಕೆಟ್​ಗೆ 186 ರನ್​ ಕಲೆಹಾಕಿತು. ಪ್ರತಿಯಾಗಿ ಆರ್​ಸಿಬಿ ತಂಡ ಕೊಹ್ಲಿ- ಪ್ಲೆಸಿಸ್​ ಜೋಡಿಯ ಭರ್ಜರಿ ಮೊದಲ ವಿಕೆಟ್​ ಜತೆಯಾಟದ ನೆರವಿನಿಂದ 19.2 ಓವರ್​ಗಳಲ್ಲಿ 2 ವಿಕೆಟ್​ಗೆ 187 ರನ್​ ಪೇರಿಸಿ ಗೆಲುವಿನ ಕೇಕೇ ಹಾಕಿತು. (ಏಜೆನ್ಸೀಸ್​)

    ಕೊಹ್ಲಿ ಸೆಂಚುರಿ | ಗೆದ್ದ ಆರ್‌ಸಿಬಿ; ಪ್ಲೇ ಆಫ್ ಆಸೆ ಜೀವಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts