

ಮುಂಬೈ: ಹೇಳಿಕೊಳ್ಳೋಕೆ ಒಂದೇ ಒಂದು ಚಿತ್ರದಲ್ಲೂ ಬಣ್ಣ ಹಚ್ಚಿಲ್ಲ ಬಿಗ್ ಬಿ ಮೊಮ್ಮಗಳಾದ ನವ್ಯಾ ನವೇಲಿ ನಂದಾ. ಆದರೆ, ಈಗಾಗಲೇ ಬೇರೆಬೇರೆ ಕಾರಣಗಳಿಗೆ ಸಾಕಷ್ಟು ಸುದ್ದಿಯಾಗಿದ್ದಾರೆ. ಈಗ ಅವರು ಇನ್ನೊಂದು ವಿಷಯವಾಗಿ ಸುದ್ದಿಯಲ್ಲಿದ್ದಾರೆ.
ಸಿದ್ಧಾಂತ್ ಗೊತ್ತಲ್ಲ? ಅದೇ 'ಗೆಹ್ರಾಯಿಯಾಂ' ಚಿತ್ರದಲ್ಲಿ ನಟಿಸಿದ್ದ ಸಿದ್ಧಾಂತ್ ಚತುರ್ವೇದಿ? ಆತನ ಜತೆಗೆ ಇದೀಗ ನವ್ಯಾ ಹೆಸರು ಕೇಳಿಬರುತ್ತಿದೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಬಲವಾಗಿ ಹಬ್ಬಿದೆ. ಇದು ಸುಳ್ಳು ಅಂತ ಹೇಳುವ ಹಾಗಿಲ್ಲ. ಇಬ್ಬರೂ ತರುಣರು. ಎಲ್ಲೋ ಪರಿಚಯವಾಗಿ, ಅದು ಸ್ನೇಹವಾಗಿ, ಅಲ್ಲಿಂದ ಇಬ್ಬರ ಮನಸ್ಸುಗಳು ಬೆಸೆದಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಈ ಸುದ್ದಿ ಸುಳ್ಳು ಎಂದು ಸ್ವತಃ ಸಿದ್ಧಾಂತ್ ಹೇಳಿಕೊಂಡಿದ್ದಾರೆ. ಸುದ್ದಿ ನಿಜವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರಿಗೆ ಈ ಅಂತೆ-ಕಂತೆಯ ಕುರಿತು ಕೇಳಲಾಗಿದೆ. ಏನು ನಡೆಯುತ್ತಿದೆ ನಿಮ್ಮ ಮತ್ತು ನವ್ಯಾ ನಡುವೆ ಎಂದು ಪ್ರಶ್ನಿಸಿದಾಗ, 'ಏನಾದರೂ ಆಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಏನೂ ಆಗಿಲ್ಲ. ನಾನು ಯಾರನ್ನೋ ಪ್ರೀತಿಸುತ್ತಿದ್ದೇನೆ, ಡೇಟಿಂಗ್ ಮಾಡುತ್ತಿದ್ದೇನೆ ಎಂಬಂತಹ ವಿಷಯಗಳೆಲ್ಲ ನಿಜವಾಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಅದಕ್ಕೆ ನನಗೆ ಸಮಯವೇ ಇಲ್ಲ. ನನ್ನ ಧ್ಯಾನವೆಲ್ಲ ಸಿನಿಮಾ ಕಡೆಗಿದೆ' ಎಂದು ಹೇಳಿದ್ದಾರೆ.
ಅಂದಹಾಗೆ, 'ಫೋನ್ ಬೂತ್' ಎಂಬ ಚಿತ್ರದಲ್ಲಿ ಸಿದ್ಧಾಂತ್ ನಟಿಸಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ.