ನನ್ನ ಮಕ್ಕಳು ಕಲಾವಿದರಾಗಬೇಕೆಂದರೆ ಅದು ತಪ್ಪಾ? ಬಿಪಾಶಾ ಪ್ರಶ್ನೆ

Bipasha Basu - Final
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆಯ ನಂತರ ಈ ನೆಪೋಟಿಸಂ (ಸ್ವಜನಪಕ್ಷಪಾತ) ಚರ್ಚೆ ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಕೇಳಿ ಬರುತ್ತಿದೆ. ಕೆಲವರು ಇದು ತಪ್ಪಲ್ಲ ಎಂದರೆ, ಇನ್ನೂ ಕೆಲವರು ಇದರಿಂದಾಗಿಯೇ ಹೊರಗಿನವರಿಗೆ ಅವಕಾಶ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಅದರಲ್ಲೂ ಕಂಗನಾ ರಣಾವತ್​ ಇದೇ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಹಲವರನ್ನು ಅಟ್ಯಾಕ್​ ಮಾಡುತ್ತಿದ್ದಾರೆ.

ಎಲ್ಲಾ ಸರಿ, ಈ ವಿಷಯದ ಬಗ್ಗೆ ಬಿಪಾಶಾ ಬಸು ಏನಂತಾರೆ? ಹಲವು ವರ್ಷಗಳ ಹಿಂದೆ ಅವರೂ ಯಾವುದೇ ಗಾಡ್​ಫಾದರ್​ನ ನೆರವಿಲ್ಲದೆ, ಯಾವ ಶಿಫಾರಸ್ಸೂ ಜತೆಗಿಲ್ಲದೆ, ಚಿತ್ರರಂಗ ಪ್ರವೇಶಿಸಿದರು. ನಂತರ ತಮ್ಮದೇ ಒಂದು ಗುರುತನ್ನು ಮಾಡಿಕೊಂಡವರು. ಈ ನೆಪೋಟಿಂ ಕುರಿತಾಗಿ ಅವರ ಅಭಿಪ್ರಾಯವೇನು ಎಂಬ ಪ್ರಶ್ನೆ ಬಂದೇ ಬರುತ್ತದೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಈ ಹೊರಗಿನವರು-ಒಳಗಿನವರು ಚರ್ಚೆಗೆ ಅದ್ಯಾಕೋ ತುಂಬಾ ಪ್ರಾಮುಖ್ಯತೆ ಕೊಡಲಾಗುತ್ತದೆ. ನಾನು ಹೊರಗಿನವಳು. ಚಿತ್ರರಂಗಕ್ಕೆ ಬರುವಾಗ ನನಗೆ ಇಲ್ಲಿ ಯಾರ ಪರಿಚಯವೂ ಇರಲಿಲ್ಲ. ಇಲ್ಲಿಗೆ ಬಂದ ನಂತರ ಪ್ರೇಕ್ಷಕರು ಒಪ್ಪಿಕೊಂಡಿದ್ದರಿಂದ ಒಳಗಿನವಳಾದೆ. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಹೋರಾಟಗಳಿರುತ್ತವೆ. ಅದು ಸ್ಟಾರ್ ಮಕ್ಕಳಾದರೂ ಇರಬಹುದು, ಹೊರಗಿನವರಾದರೂ ಇರಬಹುದು. ಎಲ್ಲರೂ ಹೋರಾಟ ಮಾಡಿ, ಕಷ್ಟಪಟ್ಟೇ ಮೇಲಕ್ಕೆ ಬರಬೇಕೇ ಹೊರತು, ಬೇರೆ ಶಾರ್ಟ್​ಕಟ್​​ ಇಲ್ಲ' ಎನ್ನುತ್ತಾರೆ ಬಿಪಾಶಾ.

'ಒಮ್ಮೆ ಪ್ರೇಕ್ಷಕರು ಕಲಾವಿದರನ್ನು ಒಪ್ಪಿಕೊಂಡರೆ, ಯಾರೂ ಅವರನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಸ್ಟಾರ್ ಮಕ್ಕಳ ಪೈಕಿ ಹಲವರ ಜತೆಗೆ ನನ್ನ ಸ್ನೇಹವಿದೆ. ಅವರು ಸ್ಟಾರ್​ ಮಕ್ಕಳಾದರೂ, ಅವರು ಸಹ ಸಾಕಷ್ಟು ಹೋರಾಟ ಮಾಡಿಯೇ ಇಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಕೆಲವರಿಗೆ ಹೆಚ್ಚು ಸಮಯ ಮಿಂಚುವುದಕ್ಕೆ ಸಾಧ್ಯವಾಗಿಲ್ಲ' ಎನ್ನುತ್ತಾರೆ ಬಿಪಾಶಾ.

ಇದನ್ನೂ ಓದಿ: ‘ಆಡಿಸಿದಾತ’ನ ಕೈಚಳಕದಲಿ ಮೂಡಿ ಬಂತು ಟೀಸರ್​ …

ಇನ್ನು ನೆಪೋಟಿಸಂ ಕುರಿತು ಮಾತನಾಡುವ ಅವರು, 'ನನಗೆ ಈ ಚರ್ಚೆ ಅರ್ಥವಾಗುತ್ತಿಲ್ಲ. ನಾಳೆ ನನ್ನ ಮಕ್ಕಳು ಸಹ ನನ್ನಂತೆ ಕಲಾವಿದರಾಗಬಯಸಿದರೆ, ಅದು ತಪ್ಪಾ? ಖಂಡಿತಾ ಇಲ್ಲ. ಎಲ್ಲರಿಗೂ ಅವರದ್ದೇ ಆದ ಆಸೆ-ಆಕಾಂಕ್ಷೆಗಳಿರುತ್ತವೆ. ನಾವು ನಮ್ಮ ಹೋರಾಟಗಳ ಬಗ್ಗೆ ಯೋಚಿಸಬೇಕು ಮತ್ತು ಮಾತನಾಡಬೇಕೇ ಹೊರತು, ಬೇರೆಯವರದ್ದಲ್ಲ' ಎಂದು ಸ್ಪಷ್ಟವಾಗಿ ಹೇಳುತ್ತಾರೆ ಬಿಪಾಶಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net