

'ಮಮ್ಮಿ', 'ದೇವಕಿ' ಸಿನಿಮಾಗಳ ಖ್ಯಾತಿಯ ನಿರ್ದೇಶಕ ಲೋಹಿತ್ ಎಚ್ ನಿರ್ಮಾಣ ಸಂಸ್ಥೆ ತೆರೆದಿರುವುದು ಗೊತ್ತಿರುವ ವಿಚಾರ. ಇದೀಗ ಹಾಗೆ ಶುರುಮಾಡಿದ 'ಫ್ರೈಡೇ ಫಿಲ್ಮ್ಸ್' ಮತ್ತು 'ಸಿಲ್ವರ್ ಟ್ರೇನ್ ಇಂಟರ್ನ್ಯಾಷನಲ್' ಬ್ಯಾನರ್ ಮೂಲಕವೇ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಚಿತ್ರಕ್ಕೆ ಲೈಫ್ ಈಸ್ ಬ್ಯೂಟಿಫುಲ್ ಎಂದು ಹೆಸರಿಟ್ಟಿದ್ದು, ದಿಯಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರವಸೆಯ ನಟ ಎನಿಸಿಕೊಂಡ ಪೃಥ್ವಿ ಅಂಬರ್ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
ಇಂದು ಆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ನಟ ಡಾಲಿ ಧನಂಜಯ್ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ಕಿಶೋರ್ ನರಸಿಂಹಯ್ಯ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಅರುಣ್ ಕುಮಾರ್ ಮತ್ತು ಸಾಬು ಅಲೋಶಿಯಸ್ ಜಂಟಿಯಾಗಿ ನಿರ್ದೇಶನ ಮಾಡಲಿದ್ದಾರೆ.
ಸದ್ಯದ ಫಸ್ಟ್ ಲುಕ್ನಲ್ಲಿ ಹಲೇ ಬೈಕ್ ಏರಿ ಹೊರಟ ಭಂಗಿಯಲ್ಲಿ ಪೃಥ್ವಿ ಕಾಣಿಸಿಕೊಂಡಿದ್ದು, ಪೋಸ್ಟರ್ ಮೂಲಕವೇ ಗಮನಸೆಳೆಯುತ್ತಿದೆ. ಈಗಾಗಲೇ ಸಿನಿಮಾ ಸ್ಕ್ರಿಪ್ಟಿಂಗ್ ಕೆಲಸ ಮುಗಿಸಿಕೊಂಡಿರುವ ಚಿತ್ರತಂಡ, ಕರೊನಾ ಹತೋಟಿಗೆ ಬರುತ್ತಿದ್ದಂತೆ ಶೂಟಿಂಗ್ಗೆ ಪ್ಲಾನ್ ಮಾಡಿಕೊಳ್ಳಲಿದೆ.
‘ಸೆಪ್ಟೆಂಬರ್ನಿಂದ ಶೂಟಿಂಗ್ ಮಾಡಿಕೊಳ್ಳುವ ಯೋಜನೆ ಹಾಕಿರುವುದರಿಂದ, ಇನ್ನೆರಡು ವಾರದಲ್ಲಿ ಕಲಾವಿದರ ಆಯ್ಕೆಯನ್ನು ಅಂತಿಮ ಮಾಡಲಿದ್ದೇವೆ. ಇದರ ಜತೆಯಲ್ಲಿ ವಾರ್ತಾ ಇಲಾಖೆಗೆ ತೆರಳಿ ಸಿನಿಮಾ ಚಿತ್ರೀಕರಣಕ್ಕೂ ಅವರಿಂದ ಅನುಮತಿ ಪಡೆದುಕೊಳ್ಳಲಿದ್ದೇವೆ’ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ ಲೋಹಿತ್.