

ತಮಗೆ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ನಲ್ಲಿ ಸರಿಯಾಗಿ ಕೆಲಸ ಸಿಗುತ್ತಿಲ್ಲ ಎಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿದ್ದೇ ಹೇಳಿದ್ದು, ಅದು 'ಆಸ್ಕರ್ ಶಾಪ' ಎಂದು ಹಿರಿಯ ನಿರ್ದೇಶಕ ಶೇಖರ್ ಕಪೂರ್ ಹೇಳಿದ್ದರು.
ಒಬ್ಬ ನಟ ಅಥವಾ ತಂತ್ರಜ್ಱನಿಗೆ ಆಸ್ಕರ್ ಪ್ರಶಸ್ತಿ ಬಂದುಬಿಟ್ಟರೆ, ಅಲ್ಲಿಗೆ ಅವರ ಕಥೆ ಮುಗಿದಂತೆ ಎಂದು ಅವರು ಭಾನುವಾರವಷ್ಟೇ, ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದರು. ಅವರ ಚಿತ್ರಗಳು ಆಸ್ಕರ್ ಪ್ರಶಸ್ತಿ ಪಡೆದಿವೆ. ಆ ನಂತರ ಅವರಿಗೆ ಬಾಲಿವುಡ್ನಲ್ಲಿ ಕಾರಣಾಂತರಗಳಿಂದ ಸರಿಯಾದ ಕೆಲಸ ಸಿಗುತ್ತಿಲ್ಲ. ರೆಹಮಾನ್ ಸಹ ಆಸ್ಕರ್ ಪ್ರಶಸ್ತಿ ವಿಜೇತರಾಗಿರುವುದರಿಂದ, ಈ ಹಿನ್ನೆಲೆಯಲ್ಲಿ ಹಾಗೆ ಹೇಳಿದ್ದರು.
ಈಗ ಅವರ ಅಭಿಪ್ರಾಯ ಸರಿ ಎಂದು ರೆಸೂಲ್ ಪೂಕ್ಕುಟ್ಟಿ ಹೇಳಿದ್ದಾರೆ. 'ಸ್ಲಂಡಾಗ್ ಮಿಲಿಯನೇರ್' ಚಿತ್ರದ ಸೌಂಡ್ ಡಿಸೈನ್ಗಾಗಿ ರೆಸೂಲ್ ಅವರಿಗೆ ಆಸ್ಕರ್ ಪ್ರಶಸ್ತಿ ಬಂದಿತ್ತು. ಆ ನಂತರ ಅವರು ಬಾಲಿವುಡ್ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟಪಟ್ಟರಂತೆ.
ಈ ಕುರಿತು ಮಾತನಾಡಿರುವ ಅವರು, 'ನಾನು ಶೇಖರ್ ಕಪೂರ್ ಅವರ ಮಾತಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತೇನೆ. ನನಗೆ ಆಸ್ಕರ್ ಪ್ರಶಸ್ತಿ ಸಿಕ್ಕ ನಂತರ, ನಿಜಕ್ಕೂ ನನಗೆ ಬಾಲಿವುಡ್ನಲ್ಲಿ ಕೆಲಸ ಸಿಗಲಿಲ್ಲ. ಕೆಲವು ಪ್ರೊಡಕ್ಷನ್ ಹೌಸ್ಗಳು, ನಮಗೆ ನಿಮ್ಮ ಅವಶ್ಯಕತೆ ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದೂ ಇದೆ. ಬಹುಶಃ ಪ್ರಾದೇಶಿಕ ಭಾಷೆಗಳ ಚಿತ್ರಗಳು ಕೈಹಿಡಿಯದಿದ್ದರೆ, ನಾನು ಖಾಲಿ ಕುಳಿತಿರಬೇಕಿತ್ತು. ' ಎಂದು ಹೇಳಿಕೊಂಡಿದ್ದಾರೆ.
ಈ ವಿಷಯದಲ್ಲಿ ಯಾರನ್ನೂ ದೂಷಿಸುವುದಕ್ಕೆ ಇಷ್ಟ ಇಲ್ಲ ಎಂದು ಹೇಳಿರುವ ರೆಸೂಲ್, ಇದಕ್ಕೆಲ್ಲಾ ಕಾರಣ 'ಆಸ್ಕರ್ ಶಾಪ' ಎಂದು ಹೇಳಿದ್ದಾರೆ. 'ಎಷ್ಟೋ ದಿನಗಳ ಕಾಲ ನನಗೆ ಕೆಲಸವೇ ಸಿಕ್ಕಿರಲಿಲ್ಲ. ಆ ನಂತರ, ಆಸ್ಕರ್ ಪ್ರಶಸ್ತಿ ಸದಸ್ಯರ ಜತೆಗೆ ಒಮ್ಮೆ ಮಾತನಾಡುವಾಗ ಈ ವಿಷಯ ಹೇಳಿದ್ದರು. ಪ್ರತಿಭಾವಂತರಿಗೆ ಇದೊಂದು ಶಾಪವಾಗಿತ್ತು, ಎಲ್ಲಾ ಪ್ರಶಸ್ತಿ ವಿಜೇತರು ಸಹ ಒಂದಲ್ಲಾ ಒಂದು ಸಮಯದಲ್ಲಿ ಈ ಸಮಸ್ಯೆ ಎದುರಿಸಿದ್ದಾರೆ ಎಂದು ಧೈರ್ಯ ತುಂಬಿದರು' ಎನ್ನುತ್ತಾರೆ ರೆಸೂಲ್.
ಕೆಲಸ ಇಲ್ಲದಿದ್ದಾಗ ಬೇಸರವಾದರೂ, ಅದೊಂದು ಖುಷಿಯ ವಿಚಾರ ಎಂದು ಅವರು ಹೇಳಿಕೊಂಡಿದ್ದಾರೆ. 'ಆಸ್ಕರ್ ಪ್ರಶಸ್ತಿಯಂತಹ ಪ್ರಶಸ್ತಿಯನ್ನು ಗೆದ್ದರೂ, ಜನ ನನ್ನ ರಿಜೆಕ್ಟ್ ಮಾಡಿದರು. ಅದನ್ನೆಲ್ಲಾ ದಾಟಿ ಬಹಳ ದೂರ ಬಂದಿದ್ದೇನೆ. ಆಸ್ಕರ್ ಶಾಪ ಮುಗಿಯಿತು. ನಾವು ಸಹ ಲೈಫ್ನಲ್ಲಿ ಬಹಳಷ್ಟು ಮುಂದೆ ಹೋಗಿದ್ದೇವೆ' ಎಂದು ರೆಸೂಲ್ ಹೇಳಿಕೊಂಡಿದ್ದಾರೆ.