

ಬಾಲಿವುಡ್ನ ಕ್ಯೂಟ್ ಜೋಡಿಗಳಲ್ಲಿ ಒಂದು ಹೃತಿಕ್ ಮತ್ತು ಸುಸಾನ್ ಜೋಡಿ. ಹಲವು ವರ್ಷಗಳ ಕಾಲ ಅನ್ಯೋನ್ಯ ದಾಂಪತ್ಯ ನಡೆಸಿದ್ದ ಹೃತಿಕ್ ಮತ್ತು ಸೂಸಾನ್, ಒಂದು ಹಂತದಲ್ಲಿ ಡೈವೋರ್ಸ್ ಕೊಟ್ಟು ದೂರಾಗಿದ್ದರು. ಹೀಗೆ ದೂರಾಗಿದ್ದ ಜೋಡಿ, ಈ ಕ್ರಮೇಣ ಹತ್ತಿರವಾಗುವತ್ತ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗುತ್ತಿದೆ.
ಹೌದು, ಕೆಲವು ವರ್ಷಗಳ ಹಿಂದೆ ಹೃತಿಕ್ ತಮ್ಮ ಪತ್ನಿಗೆ ವಿಚ್ಛೇದನ ಕೊಟ್ಟಿದ್ದರು. ಡೈವೋರ್ಸ್ನಿಂದ ಪರಸ್ಪರ ಬೇರೆಯಾಗಿದ್ದರೂ, ಇಬ್ಬರೂ ಒಳ್ಳೆಯ ಗೆಳೆಯರಾಗಿದ್ದರು. ಸ್ನೇಹಿತರಾಗಿದ್ದುಕೊಂಡೇ, ತಮ್ಮ ಮಕ್ಕಳನ್ನು ಪೋಷಿಸಿದ್ದರು. ಈಗ ಮಕ್ಕಳಿಗೋಸ್ಕರವೇ ಇಬ್ಬರೂ ಒಂದಾಗುತ್ತಿರುವ ಸುದ್ದಿ ಇದೆ. ಅದಕ್ಕೆ ಕಾರಣವೇನು ಗೊತ್ತಾ? ಲಾಕ್ಡೌನ್.
ಡೈವೋರ್ಸ್ ನಂತರ ಹೃತಿಕ್ ಮತ್ತು ಸುಸಾನ್ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರು. ಲಾಕ್ಡೌನ್ ಶುರುವಾಗುತ್ತಿದ್ದಂತೆಯೇ, ಸುಸಾನ್ ತಮ್ಮ ಮಕ್ಕಳನ್ನು ಹೃತಿಕ್ ಮನೆಗೆ ಕರೆದುಕೊಂಡು ಬಂದು, ಅಲ್ಲೇ ವಾಸಿಸತೊಡಗಿದರು. ಹೆಂಡತಿ-ಮಕ್ಕಳಿಂದ ದೂರಾಗಿದ್ದ ಹೃತಿಕ್ಗೆ, ಈ ಲಾಕ್ಡೌನ್ ಅಕ್ಷರಶಃ ವರವಾಗಿ ಪರಿಣಮಿಸಿತ್ತು. ಕೆಲವು ವರ್ಷಗಳಿಂದ ದೂರಾಗಿದ್ದ ಎಲ್ಲರೂ, ಈ ಲಾಕ್ಡೌನ್ನಿಂದ ಮತ್ತೆ ಅನ್ಯೋನ್ಯರಾದರು. ಪರಸ್ಪರ ಫೋಟೋಗಳನ್ನು ತೆಗೆದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು.
ಡೈವೋರ್ಸ್ ನಂತರ ಗೆಳೆಯರಾಗಿದ್ದ ಹೃತಿಕ್ ಮತ್ತು ಸುಸಾನ್, ತಮ್ಮ ಮಕ್ಕಳಿಗೋಸ್ಕರ ಇನ್ನಷ್ಟು ಹತ್ತಿರವಾಗುವುದಕ್ಕೆ ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಳೆಯ ಸಮಸ್ಯೆಗಳನ್ನೆಲ್ಲಾ ಮರೆತು, ಎಲ್ಲರೂ ಒಂದೇ ಸೂರಿನಡಿ ವಾಸಿಸುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ವಿಷಯವನ್ನು ಹೃತಿಕ್ ಆಗಲೀ, ಸುಸಾನ್ ಆಗಲೀ ಎಲ್ಲೂ ಬಹಿರಂಗಗೊಳಿಸಿಲ್ಲ.
ಸದ್ಯಕ್ಕೆ ಗುಸುಗುಸು ಹಂತದಲ್ಲಿರುವ ಈ ಸುದ್ದಿ, ನಾಳೆ ನಿಜವಾಗಲೂ ಎಂದು ಹೃತಿಕ್ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅವರ ಹಾರೈಕೆ ನಿಜವಾಗುತ್ತದಾ ನೋಡಬೇಕು.