ರಿಷಭ್​ ಶೆಟ್ಟಿ ಅಭಿನಯದ 'ಹೀರೋ' ಟ್ರೇಲರ್​ ನೋಡಿದ್ರಾ?

Hero - Final
Published on

ಬೆಂಗಳೂರು: ಲಾಕ್​ಡೌನ್​ ಮುಗಿಯುತ್ತಿದ್ದಂತೆ ಶುರುವಾದ ಮೊದಲ ಕನ್ನಡ ಚಿತ್ರವೆಂದರೆ ಅದು ರಿಷಭ್​ ಶೆಟ್ಟಿ ಅಭಿನಯದ 'ಹೀರೋ'. ಜುಲಥ ಮೊದಲ ವಾರದಲ್ಲಿ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣ ಒಂದೇ ಹಂತದಲ್ಲಿ ಮುಗಿದಿದೆ. ಇದೀಗ ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೇಲರ್​, ಸಂಕ್ರಾಂತಿ ಪ್ರಯುಕ್ತ ಗುರುವಾರ ಬೆಳಿಗ್ಗೆ ಬಿಡುಗಡೆಯಾಗಿದೆ.

ಯೂಟ್ಯೂಬ್​ನ ರಿಷಭ್​ ಶೆಟ್ಟಿ ಪ್ರೊಡಕ್ಷನ್ಸ್​ ಚಾನಲ್​ನಲ್ಲಿ 'ಹೀರೋ' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದುವರೆಗೂ ರಿಷಭ್​ ಶೆಟ್ಟಿ ಸಿನಿಮಾಗಳೆಂದರೆ, ಅಲ್ಲಿ ಕಾಮಿಡಿ ಪ್ರಮುಖ ಪಾತ್ರವಹಿಸುತ್ತಿತ್ತು. ಆದರೆ, ಈ ಟ್ರೇಲರ್​ ನೋಡಿದರೆ, ಇದೊಂದು ಬೇರೆ ಜಾನರ್​ನ ಚಿತ್ರ ಎಂದನಿಸಿದರೆ ಆಶ್ಚರ್ಯವಿಲ್ಲ.

ಈ ಕುರಿತು ಮಾತನಾಡುವ ರಿಷಭ್​, 'ಇದೊಂದು ಬೇರೆ ಜಾನರ್​ನ ಸಿನಿಮಾ. ಚಿಕ್ಕಮಗಳೂರು ಬಳಿಯ ಒಂದು ಎಸ್ಟೇಟ್​ನಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಸಾಮಾನ್ಯವಾಗಿ ನನ್ನ ಚಿತ್ರಗಳಲ್ಲಿ ಹಾಡು, ಕಾಮಿಡಿ ಹೆಚ್ಚಿರುತ್ತದೆ. ಆದರೆ, ಇದೊಂದು ಥ್ರಿಲ್ಲರ್​ ಶೈಲಿಯ ಚಿತ್ರ. ಇಲ್ಲಿ ರಕ್ತ, ವಯೊಲೆನ್ಸ್​ ಇದೆ. ಆದರೂ ಅದು ಕಣ್ಣಿಗೆ ರಾಚುವುದಿಲ್ಲ. ಒಬ್ಬ ನಟನಾಗಿ ಬೇರೆಬೇರೆ ಜಾನರ್​ ನೋಡುವ ಆಸೆಯಿಂದ ಈ ಚಿತ್ರ ಮಾಡಿದ್ದೇನೆ. ಹೀರೋಯಿಸಂ ಇಲ್ಲದಿರುವ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ' ಎನ್ನುತ್ತಾರೆ.

'ಹೀರೋ' ಚಿತ್ರದಲ್ಲಿ ರಿಷಭ್​ಗೆ ನಾಯಕಿಯಾಗಿ ಗಾನವಿ ಲಕ್ಷ್ಮಣ್​ ಅಭಿನಯಿಸಿದ್ದು, ಮಿಕ್ಕಂತೆ ಪ್ರಮೋದ್​ ಶೆಟ್ಟಿ, ಮಂಜುನಾಥ್​ ಗೌಡ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಅರವಿಂದ್​ ಕಶ್ಯಪ್​ ಛಾಯಾಗ್ರಹಣ ಮಾಡಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ. ಭರತ್​ರಾಜ್​ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net