ಕಿಂಗ್ ಖಾನ್​ ಮೀಟ್​ ಮಾಡಲು ಈ ಕನ್ನಡದ ನಿರ್ದೇಶಕ ಏನು ಮಾಡಿದ್ರು ಗೊತ್ತಾ?

Shahrukh - Jayanth
Published on

ಮುಂಬೈ: ದೊಡ್ಡದೊಡ್ಡ ಸ್ಟಾರ್​ಗಳನ್ನು ಭೇಟಿ ಮಾಡಿ, ಅವರಿಗೆ ಕಥೆ ಹೇಳುವುದು ಅಷ್ಟು ಸುಲಭವಲ್ಲ. ಕಥೆ ಹೇಳುವುದು ಬಿಡಿ, ಸ್ಟಾರ್​ಗಳನ್ನು ಭೇಟಿ ಮಾಡುವುದೇ ಕಷ್ಟ. ಹೀಗಿರುವಾಗ ಕನ್ನಡದ ನಿರ್ದೇಶಕರೊಬ್ಬರು ಶಾರೂಖ್​ ಖಾನ್​ ಅವರನ್ನು ಭೇಟಿ ಮಾಡುವುದಕ್ಕೆ ಪ್ರಯತ್ನಿಸಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಆ ನಿರ್ದೇಶಕ ಯಾರು ಗೊತ್ತಾ? ಜಯಂತ್​ ಸೀಗೆ.

ಈ ಜಯಂತ್​ ಕನ್ನಡದಲ್ಲಿ '96' ಎಂಬ ಥ್ರಿಲ್ಲರ್​ ಚಿತ್ರವನ್ನು ನಿರ್ದೇಶಿಸಿದವರು. 'ಗಿರಿಗಿಟ್ಲೆ' ಮತ್ತು 'ಕಥಾ ಸಂಗಮ' ಚಿತ್ರಗಳ ಚಿತ್ರಕಥೆಯಲ್ಲಿ ತೊಡಗಿಸಿಕೊಂಡವರು. 'ಉಳಿದವರು ಕಂಡಂತೆ' ಚಿತ್ರದ ಪ್ರೊಡಕ್ಷನ್​ ವಿಭಾಗದಲ್ಲೂ ಕೆಲಸ ಮಾಡಿದ್ದರಂತೆ. ಇಷ್ಟು ಅನುಭವವಿರುವ ಜಯಂತ್​ಗೆ ಶಾರೂಖ್​ ಖಾನ್​ ಅಭಿನಯದಲ್ಲಿ ಒಂದು ಚಿತ್ರ ಮಾಡಬೇಕು ಎಂದಾಸೆ. ಶಾರೂಖ್​ಗಾಗಿಯೇ ಅವರು 'ಪ್ರಾಜೆಕ್ಟ್​ ಎಕ್ಸ್​' ಎಂಬ ಕಥೆ ಮಾಡಿಟ್ಟುಕೊಂಡಿದ್ದಾರೆ. ಆದರೆ, ಅವರನ್ನು ಸಂಪರ್ಕಿಸುವುದು ಹೇಗೆ? ಈ ವಿಷಯ ಮಾತ್ರ ಅವರಿಗೆ ಗೊತ್ತಾಗಲಿಲ್ಲವಂತೆ.

ಸರಿ, ಒಂದು ಐಡಿಯಾ ಮಾಡಿದ್ದಾರೆ. ಹೊಸ ವರ್ಷಕ್ಕೆ ಸ್ನೇಹಿತರೆಲ್ಲಾ ಗೋವಾಗೆ ಹೊರಟರೆ, ಜಯಂತ್​ ಮಾತ್ರ ಮುಂಬೈಗೆ ಹೋಗಿದ್ದಾರೆ. ಮುಂಬೈನಲ್ಲಿ ಶಾರೂಖ್​ ಖಾನ್​ ಅವರ ಮನೆ ಮನ್ನತ್​ ಮುಂದೆ ಚಿತ್ರದ ಒಂದು ದೊಡ್ಡ ಪೋಸ್ಟರ್​ ಹಿಡಿದು ನಿಂತಿದ್ದಾರೆ. ಕ್ರಮೇಣ ಆ ಕಡೆ ಓಡುವವರೆಲ್ಲ ಇದನ್ನು ಗಮನಿಸಿದ್ದಾರೆ. 'ಶಾರೂಖ್​ ಖಾನ್​ ಗಮನ ಸೆಳೆಯುವುದು ಹೇಗೆ?' ಎಂದು ಜಯಂತ್​ ಪ್ಲಕಾರ್ಡ್​ ಹಿಡಿದು ನಿಂತಿರುವುದು ಮೊದಲು ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಶಾರೂಖ್​ ಖಾನ್​ಗೆ ಜತೆಗೆ ಸಿನಿಮಾ ಮಾಡುವುದಕ್ಕೆ ನೂರಾರೂ ಜನ ಕ್ಯೂನಲ್ಲಿ ನಿಂತಿದ್ದಾರೆ. ನಾನು ಯಾರೂ ಅಲ್ಲ. ಆ ನೂರಾರು ಮೇಕರ್​ಗಳ ಸಾಲಿನಲ್ಲಿ ಕೊನೆಯಲ್ಲಿ ಇದ್ದೇನೆ. ಏನಾದರೂ ಮಾಡಿ ಶಾರೂಖ್​ ಖಾನ್​ ಅವರ ಗಮನಸೆಳೆಯಬೇಕಿತ್ತು. ಬೇರೆ ದಾರಿ ಕಾಣಲಿಲ್ಲ. ಹಾಗಾಗಿ ಶಾರೂಖ್​ ಖಾನ್​ ಅವರ ಮನೆಯ ಮುಂದೆ ಪ್ಲಕಾರ್ಡ್​ ಹಿಡಿದು ನಿಂತುಕೊಂಡೆ. ಅದನ್ನು ನೋಡಿದ ಹಲವರು, ನನಗೆ ಶುಭ ಹಾರೈಸಿ ಹೋದರು' ಎಂದು ಹೇಳಿಕೊಂಡಿದ್ದಾರೆ ಜಯಂತ್ ಸೀಗೆ.

ಶಾರೂಖ್​ ಜತೆಗೆ ಸಿನಿಮಾ ಮಾಡಬೇಕು ಎಂಬ ಐಡಿಯಾ ಜಯಂತ್​ಗೆ ಬಂದಿದ್ದು, ಶಾರೂಖ್​ ಅವರ ಒಂದು ಸಂದರ್ಶನ ನೋಡಿದ ಮೇಲಂತೆ. 'ಒಳ್ಳೆಯ ಐಡಿಯಾಗಳಿದ್ದವರು ತನ್ನನ್ನು ಸಂಪರ್ಕಿಸಬಹುದು ಎಂದು ಶಾರೂಖ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 'ಪ್ರಾಜೆಕ್ಟ್​ ಎಕ್ಸ್​' ಎಂಬ ಕಥೆ ಮಾಡಿಕೊಂಡು ಪೋಸ್ಟರ್​ ಮಾಡಿದೆ. ಅದನ್ನು ಸೋಷಿಯಲ್​ ಮೀಡಿಯಾ ಮೂಲಕ ಶಾರೂಖ್​ಗೆ ಕಳಿಸುವ ಪ್ರಯತ್ನ ಮಾಡಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ, ಅವರ ಮನೆ ಮುಂದೆ ಹೋಗಿ ನಿಂತೆ' ಎಂದು ಜಯಂತ್​ ಹೇಳಿಕೊಂಡಿದ್ದಾರೆ.

ಮುಂಬೈಗೆ ಹೋಗಿ ಶಾರೂಖ್​ ಖಾನ್​ ಅವರನ್ನು ಭೇಟಿ ಮಾಡುವುದಕ್ಕೆ ಜಯಂತ್​ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಜನವರಿ ನಾಲ್ಕಕ್ಕೆ ಅವರು ವಾಪಸ್ಸು ಬೆಂಗಳೂರಿಗೆ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net