'ಸಲಾರ್ ಚಿತ್ರತಂಡದಿಂದ ಬಂತು ಇನ್ನೊಂದು ಸುದ್ದಿ ...

Salaar - Final
Published on

ಹೈದರಾಬಾದ್​: ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ವಿಜಯ್​ಕುಮಾರ್​ ನಿರ್ಮಿಸುತ್ತಿರುವ 'ಸಲಾರ್​' ಎಂಬ ಪ್ಯಾನ್​ ಇಂಡಿಯಾ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ನ್ನು ಕಳೆದ ತಿಂಗಳೇ ಬಿಡುಗಡೆ ಮಾಡಲಾಗಿತ್ತು. ಆದರೆ, ಚಿತ್ರ ಯಾವಾಗ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇರಲಿಲ್ಲ. ಇದೀಗ ಬಂದಿರುವ ಸುದ್ದಿಯ ಪ್ರಕಾರ, ನಾಳೆ ಜನವರಿ 15ರಂದು ಚಿತ್ರದ ಮುಹೂರ್ತ ನಡೆಯಲಿದೆ.

ಹೌದು, 'ಸಲಾರ್​' ಚಿತ್ರದ ಮುಹೂರ್ತ ನಾಳೆ ಶುಕ್ರವಾರ ಹೈದರಾಬಾದ್​ನಲ್ಲಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಗಣ್ಯರ ದಂಡೇ ನೆರೆಯಲಿದ್ದು, ಮುಖ್ಯ ಅತಿಥಿಯಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ಉಪಮುಖ್ಯಮಂತ್ರಿಗಳೂ ಆಗಿರುವ ಡಾ. ಅಶ್ವತ್ಥನಾರಾಯಣ್ ಸಿ.ಎನ್ ಭಾಗವಹಿಸಲ್ಲಿದ್ದಾರೆ. ಮಿಕ್ಕಂತೆ 'ರಾಕಿಂಗ್ ಸ್ಟಾರ್' ಯಶ್, ಟಾಲಿವುಡ್​ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಮುಂತಾದವರು ಭಾಗಹಿಸಲಿದ್ದಾರೆ.

'ಸಲಾರ್​' ಚಿತ್ರದ ಚಿತ್ರೀಕರಣವು ಫೆಬ್ರವರಿ ಮೊದಲ ವಾರದಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ನಟ ಪ್ರಭಾಸ್​ ಸದ್ಯ 'ರಾಧೇ ಶ್ಯಾಮ್​' ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೈದರಾಬಾದ್​ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳು ಮತ್ತು ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಅದು ಮುಗಿಯುತ್ತಿದ್ದಂತೆಯೇ 'ಸಲಾರ್​' ಚಿತ್ರದ ಚಿತ್ರೀಕರಣಕ್ಕೆ ಪ್ರಭಾಸ್​ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

'ಸಲಾರ್​' ಚಿತ್ರದ ಚಿತ್ರೀಕರಣವನ್ನು ಕೇವಲ 45 ದಿನಗಳಲ್ಲಿ ಪ್ರಶಾಂತ್​ ನೀಲ್​ ಮುಗಿಸುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಭುವನ್​ ಗೌಡ ಅವರ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಅವರ ಸಂಗೀತ ನಿರ್ದೇಶನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net