

ಬಸ್ಸಿ ಪಠಾಣಾ: ಲಾಕ್ಡೌನ್ನಿಂದ ಮನೆಯಲ್ಲೇ ಕೂತಿದ್ದ ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್, ಇದೀಗ ಮನೆಯಿಂದ ಹೊರಬಂದಿರುವುದಷ್ಟೇ ಅಲ್ಲ, ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 'ಗುಡ್ಲಕ್ ಜೆರ್ರಿ' ಎಂಬ ಚಿತ್ರಕ್ಕಾಗಿ ಪಂಜಾಬ್ನ ಬಸ್ಸಿ ಪಠಾಣಾ ನಗರದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಈ ಮಧ್ಯೆ, ರೈತರ ಕೆಂಗಣ್ಣಿಗೆ ಗುರಿಯಾಗಿದ್ದರಿಂದ ಅವರು ಚಿತ್ರೀಕರಣ ನಿಲ್ಲಿಸುವ ಪ್ರಸಂಗ ಇತ್ತೀಚೆಗೆ ನಡೆದಿದೆ.
ಇದನ್ನೂ ಓದಿ: ‘ಸಲಾರ್ ಚಿತ್ರತಂಡದಿಂದ ಬಂತು ಇನ್ನೊಂದು ಸುದ್ದಿ …
ಕಳೆದ ಕೆಲವು ದಿನಗಳಿಂದ ಪಂಜಾಬ್ನಲ್ಲಿ ರೈತರ ಚಳವಳಿ ನಡೆಯುತ್ತಿರುವುದು ಗೊತ್ತೇ ಇದೆ. ಆದರೆ, ಇದೆಲ್ಲದರಿಂದ ದೂರವೇ ಇರುವ ಜಾಹ್ನವಿ, ತಮ್ಮ ಪಾಡಿಗೆ ತಾವು ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿದ ಒಂದಿಷ್ಟು ರೈತರ ಗುಂಪು, ತಮ್ಮ ಚಳವಳಿಗೆ ಸಹಕಾರ ನೀಡಬೇಕು ಎಂದು ಕೇಳಿದ್ದಾರೆ. ಇದರಿಂದ ಒಂದಿಷ್ಟು ಸಮಯ ಚಿತ್ರೀಕರಣ ನಿಂತಿದೆ. ಹಾಗಂತ ಯಾರಿಗೂ, ಏನೂ ಸಮಸ್ಯೆಯಾಗಲಿಲ್ಲವಂತೆ.
ಈ ಕುರಿತು ಮಾತನಾಡಿರುವ ಅಲ್ಲಿನ ಪೊಲೀಸ್ ವರಿಷ್ಠರು, 'ಯಾವುದೇ ಅಹಿತಕರ ಘಟನೆಯೂ ನಡೆದಿಲ್ಲ. ಅವರೆಲ್ಲ ಶಾಂತರೀತಿಯಲ್ಲಿ ನಡೆದುಕೊಂಡರು. ಅವರಿಗೆ ಬೇಕಾಗಿದ್ದು, ಸಹಕಾರವಷ್ಟೇ. ಸಿನಿಮಾದವರು ಸಹಕಾರ ಕೊಡುತ್ತೀನಿ ಎಂದು ಭರವಸೆ ಕೊಟ್ಟ ನಂತರ ಎಲ್ಲವೂ ಬಗೆಹರಿಯಿತು. ಅಲ್ಲಿ ಯಾವುದೇ ಸಮಸ್ಯೆ ಆಗಿಲ್ಲ' ಎಂದು ಹೇಳಿಕೊಂಡಿದ್ದಾರೆ.
ಅದಕ್ಕೆ ಸರಿಯಾಗಿ ಜಾಹ್ನವಿ ಕಪೂರ್ ಸಹ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ರೈತರೇ ಈ ದೇಶದ ಬೆನ್ನೆಲುಬು ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, 'ರೈತರು ಈ ದೇಶದ ಆತ್ಮ. ಜನರ ಹೊಟ್ಟೆ ತುಂಬಿಸುವಲ್ಲಿ ಅವರ ಪಾತ್ರ ಮಹತ್ವದ್ದು. ರೈತರಿಗೆ ಅನುಕೂಲವಾಗುವಂತ ನಿರ್ಣಯಗಳು ಆದಷ್ಟು ಬೇಗ ತೆಗೆದುಕೊಳ್ಳಲಾಗುತ್ತದೆ ಎಂಬ ನಿರೀಕ್ಷೆಯಲ್ಲಿ' ಎಂದು ಅವರು ಬರೆದುಕೊಂಡಿದ್ದಾರೆ.
ಈ ಹಿಂದೆ 'ತನು ವೆಡ್ಸ್ ಮನು', 'ರಾಂಜಾನ್ಹಾ' ಮುಂತಾದ ಚಿತ್ರಗಳನ್ನು ನಿರ್ದೇಶಿಸುತ್ತಿರುವ ಆನಂದ್ ಎಲ್ ರೈ, ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.