ನಾಯಕ ನಾನೇ : ಹೀರೋ ಚಿತ್ರದ ಫಸ್ಟ್​ಲುಕ್ ಬಿಡುಗಡೆ

Hero
Published on

ಬೆಂಗಳೂರು: ಲಾಕ್​ಡೌನ್ ಮುಗಿದು ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ಸಿಗುತ್ತಿದ್ದಂತೆಯೇ, ರಿಷಬ್ ಶೆಟ್ಟಿ ಸದ್ದಿಲ್ಲದೆ ಹೊಸ ಚಿತ್ರವೊಂದರ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಈ ಚಿತ್ರದಲ್ಲಿ ಅವರು ಹೀರೋ ಅಷ್ಟೇ ಅಲ್ಲ, ಚಿತ್ರಕ್ಕೂ ‘ಹೀರೋ’ ಎಂಬ ಹೆಸರನ್ನೇ ಇಡಲಾಗಿದೆ. ಈ ‘ಹೀರೋ’ನ ಫಸ್ಟ್ ಲುಕ್ ಪೋಸ್ಟರ್ ಗುರುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ.

‘ನೀವು ಹೇಡಿಯಾಗದೆ, ಹೀರೋ ಆಗುವುದಕ್ಕೆ ಸಾಧ್ಯವಿಲ್ಲ ...’ ಎಂಬ ಸಬ್​ಟೈಟಲ್ ಇರುವ ಈ ಚಿತ್ರ ಈಗಾಗಲೇ ವೈರಲ್ ಆಗಿದೆ. ಇದೊಂದು ಮಜವಾದ ಕಥೆ ಎಂದು ಖುಷಿಪಡುವ ರಿಷಭ್, ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದಷ್ಟೇ ಅಲ್ಲ, ಚಿತ್ರದ ನಿರ್ವಣವನ್ನೂ ಮಾಡಿದ್ದಾರೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮಾರ್ಚ್ ಹೊತ್ತಿಗೇ ‘ರುದ್ರಪ್ರಯಾಗ’, ‘ಹರಿಕಥೆ ಅಲ್ಲ ಗಿರಿಕಥೆ’ ಮತ್ತು ‘ಲಾಫಿಂಗ್ ಬುದ್ಧ’ ಚಿತ್ರಗಳ ಕಥೆ ರೆಡಿಯಾಗಿ ಇನ್ನೇನು ಶೂಟಿಂಗ್​ಗೆ ಹೊರಡಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್ ಘೋಷಣೆಯಾಯಿತು. ಈ ಮಧ್ಯೆ, ಈ ಚಿತ್ರದ ಕಥೆ ರೆಡಿಯಾಯಿತು. ಲಾಕ್​ಡೌನ್ ಮುಗಿಯುತ್ತಿದ್ದಂತೆಯೇ, ಚಿಕ್ಕಮಗಳೂರು ಕಡೆ ಹೋಗಿ ಸದ್ದಿಲ್ಲದೆ 45 ದಿನಗಳ ಕಾಲ ಚಿತ್ರೀಕರಣ ಮಾಡಿ ಬಂದಿದ್ದೇವೆ. ಚಿತ್ರದ ಡಬ್ಬಿಂಗ್ ಸಹ ಮುಗಿದಿದೆ’ ಎಂದು ಮಾಹಿತಿ ಕೊಡುತ್ತಾರೆ ರಿಷಭ್.

‘ಲಾಫಿಂಗ್’ ಬುದ್ಧ’ ಚಿತ್ರವನ್ನು ನಿರ್ದೇಶಿಸಿರುವ ಭರತ್ ರಾಜ್ ಅವರೇ ಈ ಚಿತ್ರವನ್ನು ಸಹ ನಿರ್ದೇಶನ ಮಾಡಿದ್ದಾರೆ. ಇನ್ನು, ರಿಷಬ್ ಶೆಟ್ಟಿ ಜತೆಗೆ ಗಾನವಿ, ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದರೆ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net