

ಬೆಂಗಳೂರು: ಇಂಗ್ಲೆಂಡ್ನಲ್ಲಿ ಕರೊನಾ ರೂಪಾಂತರ ಹೊಂದಿದ್ದು, ಆ ದೇಶದಿಂದ ಭಾರತಕ್ಕೆ ಮರಳುವವರ ಮೇಲೆ ನಿಗಾ ವಹಿಸಲಾಗಿದೆ. ಈ ಮಧ್ಯೆ, ಕೆಲವು ದಿನಗಳ ಹಿಂದೆ ಹರ್ಷಿಕಾ ಪೂಣಚ್ಚ ಭೋಜಪುರಿ ಚಿತ್ರದ ಚಿತ್ರೀಕರಣಕ್ಕೆ ಲಂಡನ್ಗೆ ಹೋಗಿದ್ದರು. ಈ ವಿಷಯವಾಗಿ ಕೆಲವು ವದಂತಿಗಳು ಹಬ್ಬಿದ್ದವು.
ಈ ಕುರಿತು ಸ್ಪಷ್ಟನೆ ನೀಡಿರುವ ಹರ್ಷಿಕಾ, ‘ನಾನು ಲಂಡನ್ಗೆ ಹೋಗಿದ್ದು ನಿಜ. ಆದರೆ, ಎರಡು ವಾರದ ಹಿಂದೆಯೇ ವಾಪಸ್ ಬಂದಿದ್ದೇನೆ. ಲಂಡನ್ ನನ್ನ ಇಷ್ಟದ ಸ್ಥಳ ಆಗಿರುವುದರಿಂದ ಅಲ್ಲಿನ ಸಾಕಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇನೆ. ಆದರೆ, ನಾನು ಇನ್ನೂ ಅಲ್ಲಿಯೇ ಇದ್ದೇನೆ ಎಂಬ ರೀತಿಯಲ್ಲಿ ಸುದ್ದಿ ಹರಿದಾಡುತ್ತಿದೆ. ನಾನೀಗ ಬೆಂಗಳೂರಿನಲ್ಲಿಯೇ ಇದ್ದೇನೆ. ಸುರಕ್ಷಿತವಾಗಿದ್ದೇನೆ. ಒಂದು ವಾರದ ಹಿಂದೆ ಫೋಟೋಶೂಟ್ ಸಹ ಮಾಡಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಕರೊನಾ ಭಯದಿಂದ ಈ ಬಾರಿ ಕ್ರಿಸ್ವುಸ್ ಮತ್ತು ಹೊಸ ವರ್ಷದ ಆಚರಣೆ ಸಹಜವಾಗಿಯೇ ಕಡಿಮೆಯಾಗಿದೆ. ಆದರೆ, ಸಂಭ್ರಮ ಎನ್ನುವುದು ಪಾರ್ಟಿ ಮಾಡುವುದರಿಂದ ಬರುವುದಿಲ್ಲ, ಕೆಲಸದ ಮೂಲಕವೂ ತೋರಿಸಬಹುದು ಎಂದು ಹೇಳುವ ಪ್ರಯತ್ನವನ್ನು ಫ್ಯಾಶನ್ ಡಿಸೈನರ್ ಲಕ್ಷ್ಮೀ ಕೃಷ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಮಾಡಿದ್ದಾರೆ. ಈ ಹಿಂದೆ ಸ್ಯಾಂಡಲ್ವುಡ್ ಮತ್ತು ಬಾಲಿವುಡ್ ನಟಿಯರ ಫೋಟೋಗಳಿದ್ದ ಸೀರೆ ಡಿಸೈನ್ ಮಾಡಿದ್ದ ಲಕ್ಷ್ಮೀ ಕೃಷ್ಣ, ಇದೀಗ ಕ್ರಿಸ್ವುಸ್ ನೆನಪಿಸುವಂತಹ ಎರಡು ಡ್ರೆಸ್ಗಳನ್ನು ಡಿಸೈನ್ ಮಾಡಿದ್ದು, ಆ ಡ್ರೆಸ್ಗಳಲ್ಲಿ ಹರ್ಷಿಕಾ ಮಿಂಚಿದ್ದಾರೆ. ಸೀರೆಯ ಮೇಲೆ ಸಾಂತಾ ಕ್ಲಾಸ್, ಕ್ರಿಸ್ವುಸ್ ಟ್ರೀ ಮತ್ತು ಗಿಫ್ಟ್ಗಳ ಚಿತ್ರಗಳನ್ನು ಪ್ರಿಂಟ್ ಮಾಡಿಸಲಾಗಿದೆ. ಇನ್ನೊಂದು ಡ್ರೆಸ್, ಗಿಫ್ಟ್ಗಳಿಗೆ ಕಟ್ಟುವ ರಿಬ್ಬನ್ ಮಾದರಿಯಲ್ಲಿದ್ದು, ನಾವೆಲ್ಲರೂ ಗಿಫ್ಟ್ ಗಳೇ ಎಂಬ ಪರಿಕಲ್ಪನೆಯಲ್ಲಿ ಡಿಸೈನ್ ಮಾಡಲಾಗಿದೆ.