ಅಜೇಯ್​ ರಾವ್​ಗಾಗಿ ಜತೆಯಾದ ಶಶಾಂಕ್​, ಗುರು ದೇಶಪಾಂಡೆ

Ajay Rao New Film - Final
Published on

ಬೆಂಗಳೂರು: ಇಬ್ಬರು ನಿರ್ದೇಶಕರು ಜತೆಯಾಗಿ ಕೆಲಸ ಮಾಡುವ ವಿಷಯ ಹೊಸದೇನಲ್ಲ. ಈಗಾಗಲೇ ಶಶಾಂಕ್​ ಬೇರೆ ನಾಲ್ವರು ನಿರ್ದೇಶಕರೊಂದಿಗೆ ಸೇರಿ ಹೊಸ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಗುರು ದೇಶಪಾಂಡೆ ಸಹ 'ಪೆಂಟಗನ್​' ಎಂಬ ಚಿತ್ರವನ್ನು ಇತರೆ ನಾಲ್ವರು ನಿರ್ದೇಶಕರೊಂದಿಗೆ ಸೇರಿ ನಿರ್ದೇಶಿಸುತ್ತಿದ್ದಾರೆ.

ಈಗ ಅವರಿಬ್ಬರೂ ಒಂದೇ ಚಿತ್ರದಲ್ಲಿ ಜತೆಯಾಗುತ್ತಿದ್ದಾರೆ. ವಿಶೇಷವೆಂದರೆ, ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಿಸಿದರೆ, ಶಶಾಂಕ್​ ಕಥೆ ಬರೆದಿದ್ದಾರೆ. ಇನ್ನು ಈ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿರುವುದು 'ಕೃಷ್ಣ' ಖ್ಯಾತಿಯ ಅಜೇಯ್​ ರಾವ್​. ಈ ಚಿತ್ರದಲ್ಲೂ ಅಜೇಯ್​ ರಾವ್ ಮತ್ತ ಕೃಷ್ಣನಾಗಿ ನಟಿಸುತ್ತಾರಾ ಎಂಬ ಕುತೂಹಲ ಇದೀಗ ಶುರುವಾಗಿದೆ.

ಅಷ್ಟೇ ಅಲ್ಲ, ಇದು ಸಹ ಕೃಷ್ಣ ಸೀರೀಸ್​ನ ಇನ್ನೊಂದು ಚಿತ್ರವಾಗುತ್ತದಾ ಅಥವಾ ಇದು ಬೇರೆ ಕಥೆಯಾಗಿರುತ್ತದಾ ಎಂಬ ಕುತೂಹಲವೂ ಇದ್ದು, ಈ ಕುತೂಹಲಕ್ಕೆ ಜನವರಿ 24ರಂದು ತೆರೆಬೀಳಲಿದೆ. ಚಿತ್ರದ ಮುಹೂರ್ತವು ಜನವರಿ 24ಕ್ಕೆ ನಿಗದಿಯಾಗಿದ್ದು, ಅಲ್ಲಿಂದ ಒಂದೇ ಹಂತದಲ್ಲಿ ಚಿತ್ರೀಕರನ ಮುಗಿಯಲಿದೆ.

ಈ ಹಿಂದೆ ಗುರು ದೇಶಪಾಂಡೆ ನಿರ್ದೇಶನದ 'ಜಂಟಲ್​ಮ್ಯಾನ್​', 'ಪಡ್ಡೆಹುಲಿ', 'ರುದ್ರತಾಂಡವ' ಮುಂತಾದ ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಶಂಕರ್​, ಈ ಚಿತ್ರವನ್ನು ಮೊದಲ ಬಾರಿಗೆ ಸ್ವತಂತ್ರವಾಗಿ ನಿರ್ದೇಶಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಜಿ ಸಿನಿಮಾಸ್​ ಬ್ಯಾನರ್​ನಲ್ಲಿ ಗುರು ದೇಶಪಾಂಡೆ ನಿರ್ಮಿಸುತ್ತಿದ್ದಾರೆ.

ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ಅಜೇಯ್​ ರಾವ್​, 'ಅಜೇಯ್​ ಜತೆಗೆ ಇನ್ನೊಂದು ಚಿತ್ರ ಮಾಡಬೇಕಿತ್ತು. ಅಷ್ಟರಲ್ಲಿ ಶಶಾಂಕ್​ ಅವರು ಬರೆದ ಕಥೆ ಬಹಳ ಇಷ್ಟವಾಯಿತು. ಅಜೇಯ್​ ರಾವ್​ ಅವರಿಗೆ ಸೂಕ್ತ ಎನಿಸುವಂತಹ ಕಥೆ ಇದಾಗಿದ್ದು, ಈ ಚಿತ್ರವನ್ನು ಮೊದಲು ಪ್ರಾರಂಭಿಸಲಿದ್ದೇವೆ. ಈ ಚಿತ್ರದಲ್ಲಿ ಅಜೇಯ್​ ರಾವ್​ಗೆ ಜನಪ್ರಿಯ ನಟಿಯೊಬ್ಬರು ನಾಯಕಿಯಾಗಿ ನಟಿಸಲಿದ್ದಾರೆ' ಎಂದು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net