

ಬೆಂಗಳೂರು: ಈ ಹಿಂದೆ 'ಸ್ಟೂಡೆಂಟ್ಸ್' ಮತ್ತು 'ಬಿಂದಾಸ್ ಗೂಗ್ಲಿ' ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್, ಲಾಕ್ಡೌನ್ ನಂತರ 'ಕ್ಯಾಂಪಸ್ ಕ್ರಾಂತಿ' ಎಂಬ ಹೊಸ ಚಿತ್ರ ಪ್ರಾರಂಭಿಸಿದ್ದು ನೆನಪಿರಬಹುದು. ಈಗ ಆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇತ್ತೀಚೆಗೆ ನಟ ಪುನೀತ್ ರಾಜಕುಮಾರ್ ಅವರು ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದಾರೆ.
ಇತ್ತೀಚೆಗೆ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಪುನೀತ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡದವರು ಭೇಟಿಕೊಟ್ಟು, ಟೈಟಲ್ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ.
'ಕ್ಯಾಂಪಸ್ ಕ್ರಾಂತಿ' ಎಂಬ ಹೆಸರೇ ಹೇಳುವಂತೆ ಕಾಲೇಜಿನಲ್ಲಾಗುವ ಕ್ರಾಂತಿಯ ಸುತ್ತ ಈ ಚಿತ್ರ ಸುತ್ತುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಬಾರ್ಡರ್ನಲ್ಲಿ ನಡೆಯುವ ಒಂದು ಘಟನೆ ಇಟ್ಟುಕೊಂಡು, ಅದಕ್ಕೆ ಕಾಲೇಜ್ ಹುಡುಗರು ಹೇಗೆ ಕಾರಣವಾಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ. ಕಾಲೇಜ್ ಹುಡುಗರು ಈ ಕ್ರಾಂತಿಗೆ ಕಾರಣವಾಗುವುದರಿಂದ, ಚಿತ್ರಕ್ಕೆ ಕ್ಯಾಂಪಸ್ ಕ್ರಾಂತಿ ಎಂಬ ಹೆಸರನ್ನು ಇಡಲಾಗಿದೆ.
ಲಾಕ್ಡೌನ್ ಸಮಯದಲ್ಲಿ ಈ ಚಿತ್ರದ ಕಥೆಯನ್ನು ಬರೆದಿದ್ದ ಸಂತೋಷ್, ಕಳೆದ ಎರಡು ತಿಂಗಳುಗಳಲ್ಲಿ ಚಿತ್ರೀಕರಣ ಮುಗಿಸಿದ್ದಾರೆ. ಹಿಂದಿನ ಚಿತ್ರಗಳಂತೆ, ಈ ಬಾರಿಯೂ ಅವರು ಒಂದಿಷ್ಟು ಹೊಸಬರನ್ನು ಪರಿಚಯಿಸಿದ್ದು, ಮಿಕ್ಕಂತೆ ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
'ಕ್ಯಾಂಪಸ್ ಕ್ರಾಂತಿ' ಚಿತ್ರದ ಚಿತ್ರೀಕರಣವು ಬೆಂಗಳೂರಲ್ಲದೆ ಬೆಳಗಾವಿ ಮುಂತಾದ ಕಡೆ ನಡೆದಿದ್ದು, ಚಿತ್ರಕ್ಕೆ ವಿ. ಮನೋಹರ್ ನಾಲ್ಕು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ.