ಹೊಸ ಚಿತ್ರಕ್ಕೆ ಪವನ್​, ರಾಣಾ ಪಡೆದ ಸಂಭಾವನೆ ಎಷ್ಟು?

Pawan - Rana - Final
Published on

ಹೈದರಾಬಾದ್​: 'ಅಯ್ಯಪ್ಪನುಂ ಕೋಶಿಯುಂ' ಚಿತ್ರವು ತೆಲುಗಿಗೆ ರೀಮೇಕ್ ಆಗುತ್ತಿರುವುದು ಮತ್ತು ಮೊದಲ ಬಾರಿಗೆ ಪವನ್​ ಕಲ್ಯಾಣ್​ ಹಾಗೂ ರಾಣಾ ದಗ್ಗುಬಾಟಿ ಜತೆಯಾಗಿ ನಟಿಸುವುತ್ತಿರುವುದು ಈಗಾಗಲೇ ಸುದ್ದಿಯಾಗಿದೆ. ಈಗ ಟಾಲಿವುಡ್​ ಅಂಗಳದಲ್ಲಿ ಯಾರ್ಯಾರು ಎಷ್ಟು ಸಂಭಾವನೆಯನ್ನು ಪಡೆದಿರಬಹುದು ಎಂಬ ಚರ್ಚೆ ಶುರುವಾಗಿದೆ.

ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ನಟಿಸುವುದಕ್ಕೆ ಪವನ್​ ಕಲ್ಯಾಣ್​ ಅವರು 50 ಕೋಟಿ ಸಂಭಾವನೆಯನ್ನು ಪಡೆದಿದ್ದಾರಂತೆ. ಇದಕ್ಕೂ ಮುನ್ನ ಒಂದು ಚಿತ್ರಕ್ಕೆ 35ರಿಂದ 40 ಕೋಟಿ ಸಂಭಾವನೆ ಪಡೆಯುತ್ತಿದ್ದ ಪವನ್​, ಈ ಚಿತ್ರಕ್ಕೆ ಅಷ್ಟೊಂದು ಸಂಭಾವನೆ ಪಡೆಯುತ್ತಿರುವುದು ಏಕೆ ಎಂಬ ಪ್ರಶ್ನೆ ಬರಬಹುದು.

ಸಾಮಾನ್ಯವಾಗಿ ಪವನ್​ ಕಲ್ಯಾಣ್​ ಚಿತ್ರವೆಂದರೆ, ನೂರು ದಿನಗಳ ಚಿತ್ರೀಕರಣವಾದರೂ ಆಗುತ್ತದೆ. ಆದರೆ, ಈ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಕೇವಲ 30 ದಿವಸಗಳಲ್ಲಿ ಮುಗಿಸಿಕೊಡುವುದಾಗಿ ಅವರು ಹೇಳಿದ್ದಾರಂತೆ. ಹಾಗಾಗಿ ಆದಷ್ಟು ಬೇಗ ಚಿತ್ರದ ಚಿತ್ರೀಕರಣವನ್ನು ಮುಗಿಸಿ, ಮುಂದಿನ ವರ್ಷದಲ್ಲೇ ಚಿತ್ರ ಬಿಡುಗಡೆ ಮಾಡುವುದು ಚಿತ್ರತಂಡದ ಐಡಿಯಾ. ಹಾಗಾಗಿ, ಪವನ್​ ಅವರಿಗೆ 30 ಕೋಟಿ ಸಂಭಾವನೆ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ರಾಣಾ ದಗ್ಗುಬಾಟಿಗೆ ಆರು ಕೋಟಿ ಸಂಭಾವನೆಯನ್ನು ನೀಡಲಾಗಿದೆ ಎಂಬ ಸುದ್ದಿ ಇದೆ.

ಮೂಲ ಚಿತ್ರದಲ್ಲಿ ಬಿಜು ಮೆನನ್​ ಮಾಡಿದ್ದ ಪಾತ್ರವನ್ನು ಪವನ್​ ಕಲ್ಯಾಣ್​ ರೀಮೇಕ್​ನಲ್ಲಿ ಮಾಡಿದರೆ, ಪೃಥ್ವಿರಾಜ್​ ಮಾಡಿದ್ದ ಪಾತ್ರವನ್ನು ರಾಣಾ ದಗ್ಗುಬಾಟಿ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.

ಈ ಹೆಸರಿಡದ ಚಿತ್ರವನ್ನು ಸಾಗರ್​ ಕೆ ಚಂದ್ರ ಎನ್ನುವವರು ನಿರ್ದೇಶಿಸುತ್ತಿದ್ದು, ಸಿತಾರಾ ಎಂಟರ್​ಟೈನ್​ಮೆಂಟ್ಸ್​ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಸೋಮವಾರ ಈ ಚಿತ್ರದ ಮುಹೂರ್ತವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net