ಹಂಸಿಕಾ ಮೋಟ್ವಾನಿ ಮದುವೆ ಆಗುತ್ತಿರುವ ವರ ಯಾರು ಗೊತ್ತಾ?

Hansika Motwani (5)
Published on

ಮುಂಬೈ: ಪುನೀತ್​ ಅಭಿನಯದ 'ಬಿಂದಾಸ್​' ಚಿತ್ರದಲ್ಲಿ ನಟಿಸಿದ್ದ ಹಂಸಿಕಾ ಮೋಟ್ವಾನಿ ಇತ್ತೀಚಿನ ವರ್ಷಗಳಲ್ಲಿ ತೆಲುಗು ಮತ್ತು ತಮಿಳಿನಲ್ಲೇ ಹೆಚ್ಚು ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ಅವರು ಮದುವೆಯಾಗುತ್ತಿರುವ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಆದರೆ, ವರ ಯಾರು ಮತ್ತು ಮದುವೆ ಯಾವಾಗ ಎಂಬ ವಿಷಯಗಳು ಬಹಿರಂಗವಾಗಿರಲಿಲ್ಲ. ಈಗ ಎರಡೂ ಬಹಿರಂಗವಾಗಿವೆ.

ಅಂದಹಾಗೆ, ಹಂಸಿಕಾ ಮದುವೆಯಾಗುತ್ತಿರುವ ವರನ ಹೆಸರು ಸೋಹೈಲ್​ ಕಠೂರಿಯಾ. ಈತನ ಬಗ್ಗೆ ಹೆಚ್ಚು ವಿವರಗಳು ಬಹಿರಂಗವಾಗಿಲ್ಲ. ಆದರೆ, ಈಗ ಹಂಸಿಕಾ ಅವರ ಬಿಜಿನೆಸ್​ ಪಾರ್ಟ್ನರ್​ ಎಂದು ಹೇಳಲಾಗುತ್ತಿದೆ. ಕೆಲವು ವರ್ಷಗಳಿಂದು ಒಳ್ಳೆಯ ಸ್ನೇಹಿತರಾಗಿದ್ದ ಹಂಸಿಕಾ ಮತ್ತು ಸೋಹೈಲ್​ ಈಗ ದಂಪತಿಗಳಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಬ್ಬರ ಮದುವೆ ಡಿಸೆಂಬರ್​ 4ರಂದು ಜೈಪುರದ ಮಂಡೋಟ ಫೋರ್ಟ್​ನಲ್ಲಿ ನಡೆಯಲಿದೆ.

ಮದುವೆ ನಡೆಯುವುದಾದರೂ ಡಿ.4ಕ್ಕೆ ಆದರೂ, ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಡಿ. 2ರಿಂದಲೇ ಪ್ರಾರಂಭವಾಗಲಿದೆಯಂತೆ. ಅಂದು ಮೆಹಂದಿ ಕಾರ್ಯಕ್ರಮವಿದ್ದು, ಮರುದಿನ ಸಂಗೀತ್​ ಆಯೋಜಿಸಲಾಗಿದೆ. ಡಿ. 4ರ ಮುಂಜಾನೆ ಹಳದಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಮದುವೆ ನಡೆಯಲಿದೆ.

ಹೃತಿಕ್​ ರೋಶನ್​ ಅಭಿನಯದ "ಕೋಯಿ ಮಿಲ್​ ಗಯಾ' ಎಂಬ ಬಾಲಿವುಡ್​ ಚಿತ್ರದ ಮೂಲಕ ಬಾಲನಟಿಯಾಗಿ ಎಂಟ್ರಿ ಕೊಟ್ಟವರು ಹಂಸಿಕಾ ಮೋಟ್ವಾನಿ. ಅಲ್ಲಿಂದ ಈ 19 ವರ್ಷಗಳಲ್ಲಿ ಹಂಸಿಕಾ, ನಾಲ್ಕು ಭಾಷೆಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಹಿಂದೊಮ್ಮೆ ಹಂಸಿಕಾ ಹೆಸರು ಸಿಂಬು ಜತೆಗೆ ಕೇಳಿಬಂದಿತ್ತು. ಆದರೆ, ಸಿಂಬು ಜತೆಗೆ ಸಂಬಂಧ ಕಡಿದುಕೊಂಡ ಹಂಸಿಕಾ ಒಬ್ಬಂಟಿಯಾಗಿದ್ದರು. ಈಗ ಆಕೆ ಸೋಹೈಲ್​ ಅವರನ್ನು ಮದುವೆಯಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net