

ಮುಂಬೈ: ‘ಮೇಜರ್’, ‘ಹಿಟ್ 2’ ಚಿತ್ರಗಳ ಯಶಸ್ಸಿನಿಂದ ಅಡಿವಿ ಶೇಷ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಈ ಎರಡೂ ಚಿತ್ರಗಳು ದೇಶಾದ್ಯಂತ ಗೆಲ್ಲುತ್ತಿದ್ದಂತೆಯೇ, ಅವರ ಇನ್ನೊಂದು ಚಿತ್ರ ಸಹ ಪ್ಯಾನ್ ಇಂಡಿಯಾ ಚಿತ್ರವಾಗಿ ರೂಪುಗೊಳುತ್ತಿದೆ. ಅದೇ 'ಜಿ2'. ಈ ಚಿತ್ರದ ಫಸ್ಟ್ ಲುಕ್ ಹಾಗೂ ಪ್ರೀ-ವಿಷನ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ.
ತೆಲುಗು ಚಿತ್ರರಂಗದಲ್ಲಿ ಹೊಸ ಹವಾ ಸೃಷ್ಟಿಸಿದ ‘ಗೂಢಚಾರಿ’ಯ ಸೀಕ್ವೆಲ್ ಈ 'ಜಿ2'. ಮೂಲ ಚಿತ್ರದಲ್ಲಿನ ತಮ್ಮ ಪಾತ್ರವನ್ನು ಇಲ್ಲೂ ಮುಂದುವರೆಸುತ್ತಿದ್ದಾರೆ ಅಡಿವಿ. ದೊಡ್ಡ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಕಾನ್ವಾಸ್ ಇದೆ.
ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಚಿತ್ರಕ್ಕೆ ಅಡಿವಿ ಶೇಷ್ ಕಥೆ ಬರೆದಿದ್ದು, ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು AK ಎಂಟಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ನಡಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ವಾಲ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಮೊದಲ ಚಿತ್ರದಲ್ಲಿದ್ದ ಕಲಾವಿದರ ಜತೆಗೆ ಒಂದಿಷ್ಟು ಬೇರೆ ಕಲಾವಿದರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.