

ಹೈದರಾಬಾದ್: ಚಿರಂಜೀವಿ ಅಭಿನಯದ 'ವಾಲ್ಟರ್ ವೀರಯ್ಯ' ಚಿತ್ರವು ಗುರುವಾರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಮೂರು ಚಿತ್ರಗಳಿಂದ ಸೋಲಿನ ರುಚಿಯನ್ನೇ ನೋಡಿರುವ ಚಿರಂಜೀವಿ, ಈ ಚಿತ್ರ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಈ ಮಧ್ಯೆ ಚಿರಂಜೀವಿ, ಹೈದರಾಬಾದ್ ಬಿಟ್ಟು ವಿಶಾಖಪಟ್ಟಣಂ ನಿವಾಸಿಯಾಗಲಿದ್ದಾರಂತೆ. ಹಾಗಂತ ಖುದ್ದು ಚಿರಂಜೀವಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ, 'ವಾಲ್ಟರ್ ವೀರಯ್ಯ' ಚಿತ್ರದ ಪ್ರೀರಿಲೀಸ್ ಇವೆಂಟ್ನಲ್ಲಿ ಮಾತನಾಡಿರುವ ಅವರು, ಹಲವು ವಿಷಯಗಳನ್ನು ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲಿ ತಮ್ಮ ಮೆಚ್ಚಿನ ನಗರ ವೈಜಾಗ್ನಲ್ಲಿ ಸಮುದ್ರದಡದ ಬಳಿ ನೆಲೆಗೊಳ್ಳುವುದು ಸಹ ಒಂದು.
'ವೈಜಾಗ್ನ ನಿವಾಸಿಯಾಗಬೇಕು ಎನ್ನುವುದು ನನ್ನ ಬಹಳ ವರ್ಷಗಳ ಕನಸು. ಈ ನಿಟ್ಟಿನಲ್ಲಿ ಇದೀಗ ಹೆಜ್ಜೆ ಇಟ್ಟಿದ್ದೇನೆ. ಭೀಮ್ಲಿ ಪ್ರದೇಶದಲ್ಲಿ ಜಾಗ ಕೊಂಡಿದ್ದು, ಅಲ್ಲೊಂದು ಮನೆ ಕಟ್ಟಿಸುವ ಯೋಚನೆ ಇದೆ. ಸದ್ಯಕ್ಕೆ ರಜೆ ಕಳೆಯಲಿಕ್ಕೆ ಆ ಮನೆಯನ್ನು ಬಳಸುತ್ತೇನೆ. ಕ್ರಮೇಣ ಅಲ್ಲೇ ಹೋಗಿ ಸೆಟಲ್ ಆಗುವ ಯೋಚನೆ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.
ತೆಲಂಗಾಣದಲ್ಲಿರುವ ತೆಲುಗು ರಂಗವನ್ನು ಆಕರ್ಷಿಸುವುದಕ್ಕೆ ತನ್ನತ್ತ ಆಂಧ್ರ ಪ್ರದೇಶ ಸರ್ಕಾರವು ಹಲವು ಕಸರತ್ತುಗಳನ್ನು ಮಾಡುತ್ತಿದೆ. ಅಲ್ಲಿ ಸ್ಟುಡಿಯೋಗಳನ್ನು ಸ್ಥಾಪಿಸಿ, ಅಲ್ಲೇ ಚಿತ್ರೀಕರಣ ಮಾಡುವುದಕ್ಕೆ ಹಲವು ಆಫರ್ಗಳನ್ನು ಚಿತ್ರರಂಗಕ್ಕೆ ನೀಡುತ್ತಿದೆ. ಚಿರಂಜೀವಿ ಇದೀಗ ವೈಜಾಗ್ನಲ್ಲಿ ನೆಲೆಗೊಳ್ಳುವ ಬಗ್ಗೆ ಮಾತಾಡಿದ್ದು, ಇದೇ ಪ್ಲಾನ್ನ ಒಂದು ಭಾಗವ ಎಂಬ ಚರ್ಚೆ ಟಾಲಿವುಡ್ನಲ್ಲಾಗುತ್ತಿದೆ.