

ಬೆಂಗಳೂರು: ಟಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಕನ್ನಡತಿ ನಭಾ ನಟೇಶ್ ಅವರ ಸುದ್ದಿಯೇ ಇರಲಿಲ್ಲ. 'ಮೇಷ್ಟ್ರೋ' ಚಿತ್ರದಲ್ಲಿ ನಟಿಸಿದ್ದೇ ಕೊನೆ. ಆ ನಂತರ ಅವರು ಎಲ್ಲಿ ಹೋದರು, ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಈಗ ನಭಾ ನಟೇಶ್ ಪ್ರತ್ಯಕ್ಷರಾಗಿದ್ದಾರೆ. ಎಲ್ಲಿದ್ದೆ, ಏನು ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ನಭಾ ಈ ಕುರಿತು ಒಂದು ಫೋಟೋ ಮತ್ತು ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಅಪಘಾತವೊಂದರಲ್ಲಿ ನಭಾ ಎಡ ಭುಜಕ್ಕೆ ಪೆಟ್ಟು ಬಿದ್ದಿತ್ತಂತೆ. ಮೂಳೆ ಮುರಿದಿತ್ತಂತೆ. ಇದರಿಂದ ಸಾಕಷ್ಟು ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿದಂತೆ. ಈಗ ಹುಷಾರಾಗಿ ಬಂದಿರುವ ಅವರು, ಮತ್ತೆ ಕೆಲಸ ಮಾಡುವುದಕ್ಕೆ ಮುಂದಾಗಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, 'ಕಳೆದ ವರ್ಷ ಬಹಳ ಕಠಿಣವಾಗಿತ್ತು. ಅಪಘಾತವೊಂದರಲ್ಲಿ ನನ್ನ ಎಡ ಭುಜದ ಮೂಳೆ ಮುರಿದಿತ್ತು. ಇದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈ ಸಂದರ್ಭದಲ್ಲಿ ಸಾಕಷ್ಟು ದೈಹಿಕ ಮತ್ತು ಮಾನಸಿಕ ನೋವು ಅನುಭವಿಸಿದೆ. ಈ ಸಂದರ್ಭದಲ್ಲಿ ನನಗೆ ಧೈರ್ಯ ನೀಡಿದ್ದು ನಿಮ್ಮೆಲ್ಲರ ಪ್ರೀತಿ. ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಮತ್ತು ಹಿಂದೆಂದಿಗಿಂತಲೂ ಬಲಿಷ್ಠಳಾಗಿದ್ದೇನೆ. ಹೊಸ ವರ್ಷವನ್ನು ಎದುರುಗೊಳ್ಳುವುದಕ್ಕೆ ಸಜ್ಜಾಗಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕೈಗೆ ಆಗಿದ್ದ ಗಾಯ ವಾಸಿಯಾಗಿರುವ ಫೋಟೋವೊಂದನ್ನು ಅವರು ಹಂಚಿಕೊಂಡಿದ್ದಾರೆ.
'ವಜ್ರಕಾಯ' ಮೂಲಕ ಚಿತ್ರರಂಗಕ್ಕೆ ಬಂದ ನಭಾ ನಟೇಶ್, ಆ ನಂತರ ಕೆಲವು ಚಿತ್ರಗಳಲ್ಲಿ ನಟಿಸಿ ತೆಲುಗಿಗೆ ಹಾರಿದ್ದರು. ಅಲ್ಲಿ ಬೇಡಿಕೆಯ ನಟಿಯಾಗಿದ್ದರು. ಈಗ ಚೇತರಿಸಿಕೊಂಡು ಬಂದಿರುವ ಅವರಿಗೆ ಚಿತ್ರರಂಗ ಯಾವ ರೀತಿ ಸ್ವಾಗತಿಸುತ್ತದೆ ಎಂಬುದನ್ನು ನೋಡಬೇಕಿದೆ.