ಸ್ಯಾಂಡಲ್​ವುಡ್​ ಖ್ಯಾತ ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್​ಐಆರ್​ ದಾಖಲು

K manju
Published on

ಬೆಂಗಳೂರು: ಸ್ಯಾಂಡಲ್​ವುಡ್​ ಖ್ಯಾತ ನಿರ್ಮಾಪಕ ಕೆ. ಮಂಜು ವಿರುದ್ಧ ನಗರದ ಮಹಾದೇವಪುರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಹಣ ಪಡೆದು ವಂಚನೆ ಮಾಡಿದ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ನಟಿ ತಾರಾ ಅಭಿನಯದ ಹೆಬ್ಬೆಟ್​ ರಾಮಕ್ಕ ಚಿತ್ರದ ನಿರ್ಮಾಪಕ ಎಸ್.ಎ ಪುಟ್ಟರಾಜು ನೀಡಿದ ದೂರಿನನ್ವಯ ಐಪಿಸಿ ಸೆಕ್ಷನ್ 420, 506 ಮತ್ತು 34 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಎಫ್ಐಆರ್​ನಲ್ಲಿ ಕೆ. ಮಂಜು ಎರಡನೇ ಆರೋಪಿಯಾಗಿದ್ದು, ರಾಜಗೋಪಾಲ್ ಬಿ.ಎಂ, ರಮೇಶ್ ಬಾಬು ಹಾಗೂ ವಿಜಯಲಕ್ಷ್ಮಿ ಎಂಬುವರು ಸಹ ಆರೋಪಿಗಳ ಪಟ್ಟಿಯಲ್ಲಿದ್ದಾರೆ. ಕೆ. ಮಂಜು 1 ಕೋಟಿ 10 ಲಕ್ಷ ರೂ. ಹಾಗೂ ರಾಜಗೋಪಾಲ್​ 68 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆಂದು ದೂರಲಾಗಿದೆ.

ಪ್ರಕರಣದ ವಿವರಣೆಗೆ ಬರುವುದಾದರೆ, 2018ರಲ್ಲಿ ಆರೋಪಿ ರಾಜಗೋಪಾಲ್ ತನ್ನ ಜಮೀನು ಮಾರುತ್ತಿದ್ದರಂತೆ. ಹೊಸಕೋಟೆ (ತಾ) ಸೊಣ್ಣೇನಹಳ್ಳಿ ಗ್ರಾಮದ ಸರ್ವೆ ನಂ 7/3 ರ 18.3/4 ಗುಂಟೆ ಜಮೀನು ಮಾರಾಟ ಮಾಡಲು ಮುಂದಾಗಿದ್ದಾಗ ದೂರುದಾರ ಪುಟ್ಟರಾಜು ಆರ್ಟಿಜಿಎಸ್ ಮೂಲಕ ರಾಜಗೋಪಾಲ್​ಗೆ ಹಣ ನೀಡಿದ್ದರಂತೆ.

ಆದರೆ, ಅಷ್ಟರಲ್ಲಾಗಲೇ ಕೆ. ಮಂಜು ಜಮೀನನ್ನು ತನ್ನ ಹೆಸರಿಗೆ ಅಗ್ರಿಮೆಂಟ್ ಮಾಡಿಕೊಂಡಿದ್ದರಂತೆ. ಬಳಿಕ 4 ಮಂದಿ ಸೇರಿ ರಿಜಿಸ್ಟರ್ ಮಾಡಿಕೊಡುವುದಾಗಿ ಹೇಳಿ ಪುಟ್ಟರಾಜುವಿನಿಂದ ಹಣ ಪಡೆದಿದ್ದರಂತೆ. ಆದರೆ 2018ರಲ್ಲೇ ಹಣ ಪಡೆದಿದ್ದರೂ ಈವರೆಗೂ ವಾಪಸ್ಸು ನೀಡದೇ ವಂಚನೆ ಮಾಡಿದ್ದಾರೆಂದು ಪುಟ್ಟರಾಜು ಆರೋಪಿಸಿದ್ದಾರೆ.

ಇನ್ನೂ ಹಣದ ಬಗ್ಗೆ ಮಾತನಾಡಿದ್ರೆ ಬೇರೆ ರೀತಿ ಜೀವ ಬೆದರಿಕೆ ಹಾಕಿದ್ದಾರಂತೆ. ಸದ್ಯ ಪ್ರಕರಣದ ದಾಖಲಿಸಿಕೊಂಡಿರುವ ಮಹಾದೇವಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net