ನಿರ್ಮಾಪಕರ ಚಿತ್ತ ಚಿತ್ರಮಂದಿರಗಳತ್ತ...

Ullasa
Published on

ಬೆಂಗಳೂರು: ‘ಮೊದಲು ಒಳ್ಳೆಯ ಚಿತ್ರಮಂದಿರಗಳು ಸಿಗಲಿ ಎಂದು ಕಾಯುತ್ತಿದ್ದೆವು. ಈಗ ಚಿತ್ರಮಂದಿರ ಸಿಕ್ಕರೆ ಸಾಕು ಎಂದು ಕಾಯುತ್ತಿದ್ದೇವೆ. ನಮ್ಮ ಶ್ರಮಕ್ಕೆ ಬೆಲೆ ಸಿಗಬೇಕೆಂದರೆ, ಚಿತ್ರಮಂದಿರ ಎನ್ನುವ ದೇವಸ್ಥಾನ ಪ್ರವೇಶಿಸಲೇಬೇಕು ...’ ಎಂದು ಇತ್ತೀಚೆಗಷ್ಟೇ ನಡೆದ ಜೆಕೆ ಅಭಿನಯದ ‘ಐರಾವನ್’ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಸುದೀಪ್ ಮಾತನಾಡಿದ್ದರು.

ಅದಕ್ಕೂ ಮುನ್ನ, ‘ಡಿಯರ್ ಸತ್ಯ’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದ ಪುನೀತ್, ‘ಪ್ರೇಕ್ಷಕರು ನಿಧಾನಕ್ಕೆ ಚಿತ್ರಮಂದಿರದತ್ತ ಬರುತ್ತಿದ್ದಾರೆ ಎಂಬ ವಿಷಯ ಕೇಳಿ ಖುಷಿಯಾಗುತ್ತಿದೆ. ಈ ಸಂಖ್ಯೆ ಹೆಚ್ಚಾಗಬೇಕು. ಒಂದು ಸೀಟು ಬಿಟ್ಟು ಇನ್ನೊಂದು ಸೀಟಿನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಹೋಗಿ ಶೇ. 100ರಷ್ಟು ತುಂಬುವಂತಾಗಬೇಕು’ ಎಂದು ಹೇಳಿದ್ದರು. ಇನ್ನು, ‘ನೆನಪಿರಲಿ’ ಪ್ರೇಮ್ ಸಹ, ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ಕೊಟ್ಟರೆ, ಚಿತ್ರರಂಗ ಖಂಡಿತವಾಗಿಯೂ ಮೊದಲಿನಂತೆ ಎದ್ದು ನಿಲ್ಲುತ್ತದೆ. ಹಾಗಾಗಿ, ಸರ್ಕಾರ ಇತ್ತ ಗಮನ ಹರಿಸಬೇಕು’ ಎಂದು ಹೇಳಿದ್ದಾರೆ.

ಈಗಾಗಲೇ ‘ರಾಬರ್ಟ್’ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಇನ್ನೂ ಹಲವರು ಇದೇ ನಿರ್ಧಾರಕ್ಕೆ ಬಂದಿದ್ದು, ಇಷ್ಟು ದಿನಗಳ ಕಾಲ ಕಾದಿದ್ದೇ ಉಂಟಂತೆ, ಶೇ. 100ರಷ್ಟು ಹಾಜರಾತಿ ಸಿಗುವವರೆಗೂ ಕಾಯೋಣ ಎಂಬ ತೀರ್ವನಕ್ಕೆ ಬಂದಿದ್ದಾರೆ. ಆದರೂ ಎರಡು ತಿಂಗಳುಗಳಿಗೆ ಹೋಲಿಸಿದರೆ ಎಲ್ಲ ಚಿತ್ರರಂಗಗಳ ಪರಿಸ್ಥಿತಿಯೂ ಕೊಂಚ ಸುಧಾರಿಸಿದೆ. ಬಹುಶಃ ಶೇ 100ರಷ್ಟು ಹಾಜರಾತಿ ಸಿಕ್ಕರೆ, ಚಿತ್ರರಂಗ ಮತ್ತೆ ಯಥಾಸ್ಥಿತಿಗೆ ಬಂದರೆ ಆಶ್ಚರ್ಯವಿಲ್ಲ. ಆದರೆ, ಅದಕ್ಕೆ ಎಷ್ಟು ದಿನ ಬೇಕೋ ಗೊತ್ತಿಲ್ಲ.

ಓಟಿಟಿ ಹವಾ ಕ್ಷಣಿಕವಾಯ್ತಾ?: ಲಾಕ್​ಡೌನ್ ಶುರುವಾಗಿ ಸ್ವಲ್ಪ ಸಮಯದ ನಂತರ ಓವರ್ ದಿ ಟಾಪ್​ಗಳಲ್ಲಿ (ಓಟಿಟಿ) ಚಿತ್ರಗಳು ನೇರವಾಗಿ ಬಿಡುಗಡೆಯಾದ ಸಂದರ್ಭದಲ್ಲಿ, ಇನ್ನು ಚಿತ್ರಮಂದಿರಗಳ ಕಥೆ ಅಷ್ಟೇ ಎಂಬ ಭಾವನೆ ಹಲವರಲ್ಲಿತ್ತು. ಬೆಳೆಯುತ್ತಿರುವ ತಂತ್ರಜ್ಞಾನದಿಂದ, ಮನೆಮನೆಗಳಿಗೇ ನೇರವಾಗಿ ಚಿತ್ರಗಳು ತಲುಪುತ್ತಿರುವುದರಿಂದ, ಚಿತ್ರಮಂದಿರಗಳು ಎಲ್ಲಿ ಇತಿಹಾಸದ ಪುಟಗಳಲ್ಲಿ ಸೇರಲಿವೆಯೋ ಎಂದು ಭಯ ಹಲವರಲ್ಲಿತ್ತು.ಆದರೆ, ಚಿತ್ರಗಳನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡುವ ಪ್ರಯೋಗ ಅಷ್ಟೇನೂ ಯಶಸ್ವಿಯಾಗಲಿಲ್ಲ. ಕನ್ನಡವಷ್ಟೇ ಅಲ್ಲ, ಯಾವ ಭಾಷೆಯಲ್ಲೂ ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ಚಿತ್ರಗಳು ದೊಡ್ಡ ಮಟ್ಟಿಗೆ ಗಮನ ಸೆಳೆಯಲಿಲ್ಲ. ಅದೇ ಕಾರಣಕ್ಕೆ, ನಿರ್ವಪಕರೆಲ್ಲ ಚಿತ್ರಮಂದಿರಗಳೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ, ಏನೇ ಹೊಸ ತಂತ್ರಜ್ಞಾನ ಬಂದರೂ ಚಿತ್ರಮಂದಿರಗಳನ್ನು ಮೀರಿಸುವುದಕ್ಕೆ ಯಾವುದರಿಂದಲೂ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.

ಮೊದಲಿನಂತೆ ಆಗೋದು ಯಾವಾಗ?

ಜನರೇನೋ ಚಿತ್ರಮಂದಿರಗಳಿಗೆ ಬರುವುದಕ್ಕೆ ತಯಾರಿದ್ದಾರೆ. ಆದರೆ, ‘ಆಕ್ಟ್ 1978’ ಹೊರತುಪಡಿಸಿದರೆ ಮಿಕ್ಕಂತೆ ಯಾವುದೇ ನಿರೀಕ್ಷಿತ ಚಿತ್ರಗಳು ಬರದೇ ಇರುವುದರಿಂದ ಜನ ಚಿತ್ರಮಂದಿರಗಳತ್ತ ಬರುತ್ತಿಲ್ಲ. ಇನ್ನು, ನಿರ್ವಪಕರಿಗೂ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಆಸೆ. ಆದರೆ, ಶೇ. 50ರಷ್ಟು ಹಾಜರಾತಿಯಿಂದಾಗಿ, ಹಾಕಿದ ಬಂಡವಾಳ ವಾಪಸ್ಸು ಪಡೆಯುವುದಕ್ಕೆ ಕಷ್ಟ ಎಂಬ ಕಾರಣಕ್ಕೆ ಸ್ಟಾರ್ ನಟರ ದೊಡ್ಡ ಬಜೆಟ್ ಚಿತ್ರಗಳ ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net