

ಚೆನ್ನೈ: ಕಾಲಿವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಚಿತ್ರಗಳು ಮತ್ತು ಅಭಿನಯದಿಂದ ಎಲ್ಲರ ಮನಸ್ಸಿಗೆ ಹತ್ತಿರವಾದವರೆಂದರೆ ಅದು ನಟ ವಿಜಯ್ ಸೇತುಪತಿ. ಈಗ ಅವರ ವಿರುದ್ಧ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಸೇತುಪತಿ ವಿರುದ್ಧ ಶೇಮ್ ಆನ್ ವಿಜಯ್ ಸೇತುಪತಿ ಎಂಬ ಅಭಿಯಾನವೇ ಶುರುವಾಗಿದ್ದು, ಟ್ರೆಂಡ್ ಆಗುತ್ತಿದೆ.
ಇಷ್ಟಕ್ಕೂ ವಿಜಯ್ ಸೇತುಪತಿ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗಬಹುದು. ವಿಷಯವೇನೆಂದರೆ, ಇತ್ತೀಚೆಗಷ್ಟೇ ಮುತ್ತಯ್ಯ ಮುರಳೀಧರ್ ಕುರಿತ ಬಯೋಪಿಕ್ನಲ್ಲಿ ವಿಜಯ್ ಸೇತುಪತಿ ನಟಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಟೆಸ್ಟ್ ಮ್ಯಾಚುಗಳಲ್ಲಿ ದಾಖಲೆಯ 800 ವಿಕೆಟ್ಗಳನ್ನು ಪಡೆದಿದ್ದ ಮುತ್ತಯ್ಯ ಅವರ ಈ ಬಯೋಪಿಕ್ಗೆ '800' ಎಂಬ ಹೆಸರನ್ನು ಇಡಲಾಗಿದೆ ಎಂದು ಹೇಳಲಾಗಿತ್ತು. ಈಗ ಅದೇ ವಿಷಯವಾಗಿ ವಿವಾದ ಹುಟ್ಟುಕೊಂಡಿದೆ.
ಪ್ರಮುಖವಾಗಿ ಮುತ್ತಯ್ಯ ಮುರಳೀಧರ್ ಅವರು ಶ್ರೀಲಂಕಾದ ತಮಿಳರ ಮೇಲೆ ದೌರ್ಜನ್ಯಗಳಾದಾಗ ಯಾವತ್ತೂ ಪ್ರತಿಭಟಿಸಿರಲಿಲ್ಲವಂತೆ. ಕನಿಷ್ಠ ಪಕ್ಷ ಆ ವಿಷಯದ ಕುರಿತಾದ ಒಮ್ಮೆಯೂ ಮಾತನಾಡಿರಲಿಲ್ಲವಂತೆ. ಹೀಗಿರುವಾಗ ಅಂಥವರ ಬಗ್ಗೆ ಸಿನಿಮಾ ಆಗುತ್ತಿರುವುದು ಮತ್ತು ಮುತ್ತಯ್ಯನ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿರುವುದು ಹಲವರಿಗೆ ಬೇಸರವಾಗಿದೆ. ಅದೇ ಕಾರಣಕ್ಕೆ, ವಿಜಯ್ ಸೇತುಪತಿ ಕುರಿತಾಗಿ ಆಕ್ರೋಶ ಹೆಚ್ಚಾಗಿದೆ.
ಮುತ್ತಯ್ಯ ಮುರಳೀಧರನ್ ಅವರ ಜೀವನದಲ್ಲಿ ನಡೆದ ಹಲವು ರೋಚಕ ಘಟನೆಗಳು ಈ ಚಿತ್ರದಲ್ಲಿ ಮೂಡಿಬರಲಿದೆ.
ಸದ್ಯಕ್ಕೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯಾರೆಲ್ಲಾ ಈ ಚಿತ್ರದ ಭಾಗವಾಗಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಈ ಮಧ್ಯೆ, ವಿಜಯ್ ಸೇತುಪತಿ ಅವರು ಖುದ್ದು ಮುತ್ತಯ್ಯ ಅವರಿಂದಲೇ ಬೌಲಿಂಗ್ ತರಬೇತಿ ಪಡೆಯುತ್ತಿದ್ದು, ಪಕ್ವವಾದ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.