

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಮಂದಿ ಶಾಮೀಲಾಗಿರುವ ಕುರಿತು ಕೆಲವು ಸುದ್ದಿ ವಾಹಿನಿಗಳ ತಮ್ಮನ್ನು ಕೆಟ್ಟದಾಗಿ ಬಿಂಬಿಸುತ್ತಿವೆ ಎಂದು ಬಾಲಿವುಡ್ನ ನಾಲ್ಕು ಸಂಘಟನೆಗಳು ಮತ್ತು 34 ನಿರ್ಮಾಣ ಸಂಸ್ಥೆಗಳು ದೆಹಲಿ ಹೈಕೋರ್ಟ್ಗೆ ಪ್ರಕರಣ ದಾಖಲಿಸಿದ್ದು ಗೊತ್ತೇ ಇದೆ.
ಸುದ್ದಿವಾಹಿನಿಗಳು ಚಿತ್ರರಂಗದ ಕುರಿತು ಅಷ್ಟೆಲ್ಲಾ ತೇಜೋವಧೆ ಮಾಡುತ್ತಿದ್ದರೂ ಬಾಲಿವುಡ್ ಮಂದಿ ಮುಗುಮ್ಮಾಗಿ ಕುಳಿತಿದ್ದರು. ಇದ್ದಕ್ಕಿದ್ದಂತೆ ಅವರೆಲ್ಲಾ ಒಗ್ಗಟ್ಟಾಗಿ ಫೈಟ್ ಬ್ಯಾಕ್ ಮಾಡುವುದಕ್ಕೆ ಕಾರಣವೇನು ಎಂದು ಹುಡುಕಿದರೆ, ಅದಕ್ಕೆ ಫರ್ಹಾನ್ ಅಖ್ತರ್ ಕಾರಣ ಎಂಬ ಉತ್ತರ ಬರುತ್ತದೆ.
ಮೂಲಗಳ ಪ್ರಕಾರ, ಇದರ ಹಿಂದಿರುವುದು ನಟ-ನಿರ್ದೇಶಕ ಫರ್ಹಾನ್ ಆಖ್ತರ್ ಅಂತೆ. ಈ ವಿಷಯವಾಗಿ ಅವರು ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಬಯಸದಿದ್ದರೂ, ಎರಡು ಚಾನಲ್ಗಳು ಮತ್ತು ನಾಲ್ವರು ಆಂಕರ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಫರ್ಹಾನ್ ಅವರ ಐಡಿಯಾ ಆಗಿತ್ತಂತೆ. ಬಹುಶಃ ಅವರು ಮುಂದೆ ಬರದಿದ್ದರೆ, ಬೇರೆ ನಿರ್ಮಾಪಕರು ಮತ್ತು ಸಂಘಟನೆಗಳೆಲ್ಲಾ ಒಗ್ಗಟ್ಟಾಗಿ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದೆ ಬರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.
ಬಾಲಿವುಡ್ನ ಹಲವು ಜನಪ್ರಿಯ ನಾಯಕರು ಮತ್ತು ಸಂಘಟನೆಗಳು ವಾಹಿನಿಗಳ ಮೇಲೆ ದೆಹಲಿ ಹೈಕೋರ್ಟ್ನಲ್ಲಿ ಸೋಮವಾರ ಪ್ರಕರಣ ದಾಖಲಿಸಿದ ನಡೆಯನ್ನು ಹಲವು ಸೆಲೆಬ್ರಿಟಿಗಳು ಶ್ಲಾಘಿಸಿದ್ದಾರೆ. ಸ್ವರಾ ಭಾಸ್ಕರ್, ರಣ್ವೀರ್ ಶೌರಿ, ಪ್ರಕಾಶ್ ರೈ ಮುಂತಾದವರು ಮೆಚ್ಚಿಕೊಂಡಿದ್ದಾರೆ.