

ಮುಂಬೈ: 'ಬಿಗ್ ಬಿ' ಅಮಿತಾಭ್ ಬಚ್ಚನ್ ಅವರ ವಿಷಯದಲ್ಲಿ ಯಾವಾಗಲೂ ಪ್ರಮುಖವಾಗಿ ಕೇಳಿ ಬರುವ ಒಂದು ಪ್ರಮುಖ ವಿಷಯವೇನೆಂದರೆ, ಅವರ ನಿಜವಾದ ಹೆಸರು ಇಂಕ್ವಿಲಾಬ್ ಎಂದು. ಆದರೆ, ತಮ್ಮ ನಿಜವಾದ ಹೆಸರು ಇಂಕ್ವಿಲಾಬ್ ಅಲ್ಲ, ಅಮಿತಾಭ್ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.
ಸದ್ಯ ಪ್ರಸಾರವಾಗುತ್ತಿರುವ 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ಈ ವಿಷಯವನ್ನು ಅಮಿತಾಭ್ ಸ್ಪಷ್ಟಪಡಿಸಿದ್ದು, ತಮ್ಮ ತಂದೆ-ತಾಯಿ ತಮಗೆ ಯಾವತ್ತೂ ಇಂಕ್ವಿಲಾಬ್ ಎಂಬ ಹೆಸರನ್ನು ಇಟ್ಟಿರಲಿಲ್ಲ, ಅದನ್ನು ಆ ಹೆಸರನ್ನು ತಂದೆಯವರ ಸ್ನೇಹಿತರೊಬ್ಬರು ಪ್ರಸ್ತಾಪಿಸಿದ್ದರು ಎಂದು ಹೇಳಿದ್ದಾರೆ.
ವಿಷಯವೇನೆಂದರೆ, 1942ರಲ್ಲಿ ಅಮಿತಾಭ್ ಅವರ ತಾಯಿ ಎಂಟು ತಿಂಗಳ ಗರ್ಭಿಣಿಯಾಗಿದ್ದರಂತೆ. ಎಲ್ಲರಿಗೂ ಗೊತ್ತಿರುವಂತೆ ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟ ಉಛ್ರಾಯ ಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಒಮ್ಮೆ ತೇಜಿ ಬಚ್ಚನ್ ಅವರು ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಂತೆ. ಮನೆಯ ಗಂಡಸರು ಬಂದು ನೋಡಿದಾಗ, ತೇಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ವಿಷಯ ಗೊತ್ತಾಗಿದೆ.
ಮಗು ಹುಟ್ಟುವುದಕ್ಕೆ ಮುಂಚೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರುವುದರಿಂದ, ಮಗುವಿಗೆ ಇಂಕ್ವಿಲಾಬ್ ಎಂಬ ಹೆಸರು ಯಾಕಿಡಬಾರದು ಎಂದು ಅಮಿತಾಭ್ ಬಚ್ಚನ್ ಅವರ ತಂದೆ ಹರಿವಂಶರಾಯ್ ಬಚ್ಚನ್ ಅವರ ಸ್ನೇಹಿತರೊಬ್ಬರು ಸಲಹೆ ನೀಡಿದ್ದರಂತೆ. ಆ ವಿಷಯವನ್ನು ಒಮ್ಮೆ ಎಲ್ಲೋ ಹೇಳಿಕೊಂಡಿದ್ದರಿಂದ, ಕೆಲವರು ಅದನ್ನು ತಪ್ಪಾಗಿ ಗ್ರಹಿಸಿ, ತಮ್ಮ ನಿಜ ಹೆಸರು ಇಂಕ್ವಿಲಾಬ್ ಎಂದು ಅರ್ಥೈಸಿಕೊಂಡಿರುವ ಸಾಧ್ಯತೆ ಎಂಬುದು ಅಮಿತಾಭ್ ಅಭಿಪ್ರಾಯ.
ಇನ್ನು ಅಮಿತಾಭ್ ಎಂಬ ಹೆಸರನ್ನು ಸಜೆಸ್ಟ್ ಮಾಡಿದ್ದು ಅವರ ತಂದೆಯ ಸ್ನೇಹಿತರಂತೆ. ಹರಿವಂಶರಾಯ್ ಅವರ ಸ್ನೇಹಿತ ಮತ್ತು ಖ್ಯಾತ ಕವಿ ಸುಮಿತ್ರಾನಂದನ್ ಪಂತ್, ಮಗುವಿಗೆ ಅಮಿತಾಭ್ ಎಂಬ ಹೆಸರಿಡುವುದಕ್ಕೆ ಸಲಹೆ ನೀಡಿದರಂತೆ. ಆ ಹೆಸರು ಎಲ್ಲರಿಗೂ ಇಷ್ಟವಾಗಿದ್ದರಿಂದ ಅದೇ ಹೆಸರನ್ನು ಇಡಲಾಗಿದೆಯೇ ಹೊರತು, ಇಂಕ್ವಿಲಾಬ್ ಎಂಬ ಹೆಸರನ್ನು ತಮಗೆ ಯಾವತ್ತೂ ಇಟ್ಟಿಲ್ಲ ಎಂದು ಅಮಿತಾಭ್ ಸ್ಪಷ್ಟಪಡಿಸಿದ್ದಾರೆ.