

ಮುಂಬೈ: ಬಾಲಿವುಡ್ ಬಾದ್ಶಾ ಸಿನಿಮಾ ಮಾಡದೆ ಎರಡು ವರ್ಷಗಳಾದವು. ಜೀರೋ ಸಿನಿಮಾ ಪ್ಲಾಪ್ ಆದ ಬಳಿಕ ಬೇರಾವ ಚಿತ್ರ ಒಪ್ಪಿಕೊಳ್ಳದೆ, ಸುದೀರ್ಘ ಎರಡು ವರ್ಷ ನಟನೆಯಿಂದ ಹಿಂದೆ ಸರಿದಿದ್ದರು. ನಿರ್ಮಾಣ ಸೇರಿ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇಷ್ಟೆಲ್ಲ ಆದರೂ ಅಭಿಮಾನಿಗಳು ಮಾತ್ರ, ಶಾರುಖ್ ಸಿನಿಮಾ ಘೋಷಣೆಗಾಗಿ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ನ. 2 ಸಹ ಬಂದೇ ಬಿಟ್ಟಿದೆ. ಅಭಿಮಾನಿಗಳು ಶಾರುಖ್ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ.
ಇಂದು ಶಾರುಖ್ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಆ ಸಂಭ್ರಮದ ಕ್ಷಣಕ್ಕೆ ಅವರ ಅಭಿಮಾನಿಗಳು ವಿಶೇಷ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದಾರೆ. ಇಲ್ಲಿಯವರೆಗೂ ಶಾರುಖ್ ಜನ್ಮದಿನ ಅಂದ ಬಳಿಕ ಬಾಂದ್ರಾದಲ್ಲಿನ ಮನ್ನತ್ ಮನೆಯ ಬಾಲ್ಕನಿ ಮೇಲೆ ನಿಂತು ಸಾವಿರಾರು ಅಭಿಮಾನಿಗಳಿಗೆ ಕೈ ಬೀಸಿ ದರ್ಶನ ಕೊಡುತ್ತಿದ್ದರು. ಇದೀಗ ಕರೊನಾ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನು ವರ್ಚುವಲ್ ಮೂಲಕ ಆಚರಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ.
ಶಾರುಖ್ ಫ್ಯಾನ್ ಕ್ಲಬ್ ವತಿಯಿಂದ 5555 ಮಾಸ್ಕ್, ಸ್ಯಾನಿಟೈಸರ್, ಮತ್ತು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹಂಚಿಕೆ ಕಾರ್ಯವೂ ಶುರುವಾಗಿದ್ದು, ಅಭಿಮಾನಿ ಸಂಘದವರು ತಾವು ಮಾಡುತ್ತಿರುವ ಕೆಲಸವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲಿ ಡಬ್ ಆಗಿ ತೆರೆಕಾಣಲಿದೆ ಎಸ್ಪಿಬಿ ಸಿನಿಮಾ
ಅಂದಹಾಗೆ, ಸದ್ಯ ಶಾರುಖ್ ಕುಟುಂಬದ ಜತೆ ದುಬೈನಲ್ಲಿದ್ದಾರೆ. ಬರ್ತಡೇ ನಿಮಿತ್ತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಅವರು, ‘ಈ ಸಲದ ನಿಮ್ಮ ಪ್ರೀತಿಯನ್ನು ಕೊಂಚ ದೂರದಿಂದಲೇ ಸ್ವೀಕರಿಸಲಿದ್ದೇನೆ’ ಎಂದು ಮನವಿ ಮಾಡಿದ್ದರು. ಅದರಂತೆ ವರ್ಚುವಲ್ ಪಾರ್ಟಿಯನ್ನೂ ಅಭಿಮಾನಿಗಳು ಆಯೋಜಿಸಿದ್ದಾರೆ. ಇತ್ತ ದೇಶದ ಹಲವೆಡೆ ವಿಭಿನ್ನ ರೀತಿಯಲ್ಲಿ ಶಾರುಖ್ ಹುಟ್ಟುಹಬ್ಬವನ್ನು ಫ್ಯಾನ್ಸ್ ಆಚರಿಸುತ್ತಿದ್ದಾರೆ. (ಏಜೆನ್ಸೀಸ್)