ಪುಷ್ಪ ಸಿನಿಮಾದಿಂದ ನನಗೆ… ಟಾಲಿವುಡ್​ನಲ್ಲಿ ಬಿರುಗಾಳಿ ಎಬ್ಬಿಸಿದೆ ನಟ ಫಹಾದ್ ಫಾಜಿಲ್ ಹೇಳಿಕೆ!

Fahadh Faasil
Published on

ಹೈದರಾಬಾದ್​: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ​ 'ಪುಷ್ಪ ದಿ ರೈಸ್' ಚಿತ್ರವು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಕಂಡಿದ್ದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಪುಷ್ಪ ಸಿನಿಮಾ ಧೂಳೆಬ್ಬಿಸಿತು. ಮಲಯಾಳಂ ಸೂಪರ್​ ಸ್ಟಾರ್​ ಫಹಾದ್ ಫಾಜಿಲ್ ಈ ಚಿತ್ರದಲ್ಲಿ ಎಸ್ಪಿ ಶೇಖಾವತ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರದೊಂದಿಗೆ ಫಹಾದ್​ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದರು. ಆದರೆ, ಪುಷ್ಪ ಸಿನಿಮಾದಿಂದ ನನಗೆ ಯಾವುದೇ ಪ್ರಯೋಜನವಾಗಲಿಲ್ಲ ಎನ್ನುವ ಮೂಲಕ ಇದೀಗ ಟಾಲಿವುಡ್​ ಸಿನಿ ಅಂಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಪುಷ್ಪ ಚಿತ್ರದಲ್ಲಿ ಶೇಖಾವತ್ ಪಾತ್ರದಿಂದ ಫಹಾದ್​ ಭಾರತದಲ್ಲಿ ಫೇಮಸ್ ಆದರು. ಆದರೆ, ಈ ಪಾತ್ರ ಮಾಡುವ ಮೊದಲೇ ಫಹಾದ್​ ಅವರು ಮಲಯಾಳಂನಲ್ಲಿ ದೊಡ್ಡ ಸ್ಟಾರ್ ಆಗಿದ್ದರು. ಆದರೆ, ಶೇಖಾವತ್​ ಪಾತ್ರದಿಂದ ಇನ್ನಷ್ಟು ಪ್ರಸಿದ್ಧರಾದರು. ಆದರೆ ಪುಷ್ಪ ಸಿನಿಮಾದಿಂದ ತನಗೆ ಅಷ್ಟೇನು ಪ್ರಯೋಜನವಾಗಲಿಲ್ಲ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಫಹಾದ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುಷ್ಪ ಸಿನಿಮಾದ ನಂತರ ಪ್ಯಾನ್ ಇಂಡಿಯಾ ರೇಂಜ್​ನಲ್ಲಿ ನಟನಾಗಿ ಪ್ರಶಂಸೆ ಪಡೆಯುತ್ತಿದ್ದೀರಿ ಅಲ್ವಾ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಆ್ಯಂಕರ್ ಕೇಳಿದಾಗ ಫಹಾದ್​ ಕೊಟ್ಟ ಉತ್ತರ ಟಾಲಿವುಡ್​ ಮಂದಿಯ ಹುಬ್ಬೇರಿಸಿದೆ.

ಪುಷ್ಪ ಚಿತ್ರದಿಂದ ನನಗೆ ಯಾವುದೇ ಪ್ರಯೋಜನಾ ಸಿಗಲಿಲ್ಲ. ಅಲ್ಲದೆ, ನನ್ನ ವೃತ್ತಿಜೀವನಕ್ಕೂ ಹೆಚ್ಚು ಉಪಯುಕ್ತವಾಗಲಿಲ್ಲ. ನಾನು ಸುಕುಮಾರ್​ಗೂ ಕೂಡ ಇದೇ ವಿಷಯವನ್ನು ಹೇಳಿದ್ದೆ. ಇಲ್ಲಿ ಮುಚ್ಚಿಡಲು ಏನೂ ಇಲ್ಲ. ನನಗೆ ಸುಳ್ಳು ಹೇಳುವ ಅವಶ್ಯಕತೆಯೂ ಇಲ್ಲ. ಪುಷ್ಪ ನಂತರ ನಾನು ಹೆಚ್ಚಾಗಿ ಮಲಯಾಳಂ ಸಿನಿಮಾ ಮಾಡಿದ್ದೇನೆ. ಆದರೆ ಈಗ ಮಲಯಾಳಂ ಗೊತ್ತಿಲ್ಲದವರೂ ನನ್ನ ಸಿನಿಮಾ ನೋಡುತ್ತಿದ್ದಾರೆ. ಅದು ಮಾತ್ರ ನನಗೆ ಸಂತೋಷವನ್ನು ನೀಡುತ್ತದೆ. ನನ್ನ ಮಾತುಗಳಿಂದ ನಾನು ಯಾವುದೇ ಪ್ರದೇಶಕ್ಕೆ ಅಥವಾ ಯಾವುದೇ ವ್ಯಕ್ತಿಗೆ ಅಗೌರವ ತೋರುತ್ತಿಲ್ಲ. ನನಗೆ ಅಂತಹ ಉದ್ದೇಶವೂ ಇಲ್ಲ ಎಂದು ಸಂದರ್ಶನದಲ್ಲಿ ಫಹಾದ್ ಫಾಜಿಲ್ ಹೇಳಿದ್ದಾರೆ.

ಇದೀಗ ಫಹಾದ್​ ಮಾಡಿರುವ ಕಾಮೆಂಟ್‌ಗಳು ಟಾಲಿವುಡ್​ ಇಂಡಸ್ಟ್ರಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತ ಕೆಲವರು ಪುಷ್ಪ ಚಿತ್ರ ನಿಮ್ಮನ್ನು ಭಾರತದಾದ್ಯಂತ ಗುರುತಿಸುವಂತೆ ಮಾಡಿದೆ ಎಂದು ಫಹಾದ್​ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ಅಂದಹಾಗೆ ಫಹಾದ್​ ಹೇಳಿಕೆ ಸರಿಯೇ? ತಪ್ಪೇ? ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net