More

    ಕಡು ಬಡತನ, ಅವಮಾನಗಳನ್ನು ಮೆಟ್ಟಿನಿಂತು ಏಕಕಾಲದಲ್ಲಿ 5 ಸರ್ಕಾರಿ ಕೆಲಸಗಳನ್ನು ಗಿಟ್ಟಿಸಿದ ಯುವಕ!

    ಹೈದರಾಬಾದ್​: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸುವುದೆಂದರೆ ಸುಲಭದ ಮಾತಲ್ಲ. ಜವಾನನ ಕೆಲಸಕ್ಕೂ ಕೂಡ ಇಂಜಿಯರ್​ ಓದಿದವರು ಅರ್ಜಿ ಸಲ್ಲಿಸುತ್ತಾರೆ. 100 ಹುದ್ದೆ ಇದ್ದರೆ ಅದಕ್ಕೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುತ್ತಾರೆ. ಇಷ್ಟೊಂದು ಸ್ಪರ್ಧೆ ಇರುವಾಗ ಸರ್ಕಾರಿ ಕೆಲಸ ಗಿಟ್ಟಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ. ಆದರೆ, ಏಕಕಾಲದಲ್ಲಿ ಒಂದಲ್ಲ ಐದು ಸರ್ಕಾರಿ ಕೆಲಸ ಗಿಟ್ಟಿಸುವುದೆಂದರೆ ತಮಾಷೆಯ ಮಾತಲ್ಲ. ಇಂತಹ ಪ್ರತಿಭೆಗಳು ತುಂಬಾ ಅಪರೂಪವಾಗಿ ಕಾಣಸಿಗುತ್ತವೆ. ಇತ್ತೀಚೆಗಷ್ಟೇ ತೆಲಂಗಾಣದ ಯುವಕನೊಬ್ಬನಿಗೆ ಒಂದೇ ಬಾರಿಗೆ ಐದು ಸರ್ಕಾರಿ ಕೆಲಸ ಸಿಕ್ಕಿದೆ. ಆ ಯಶಸ್ಸಿನ ಹಿಂದಿನ ಕಾರಣ ಏನು ಎಂದು ಈಗ ನೋಡೋಣ.

    ಬಡತನದ ಬೇಗೆಯಿಂದ ಒದ್ದಾಡುತ್ತಾ ಒಂದಲ್ಲ, ಎರಡಲ್ಲ, ಬರೋಬ್ಬರಿ ಐದು ಸರ್ಕಾರಿ ನೌಕರಿಗಳನ್ನು ಒಂದೇ ಬಾರಿಗೆ ಪಡೆದುಕೊಂಡ ಯುವಕನ ಹೆಸರು ಭರತ್​. ಈತ ತೆಲಂಗಾಣದ ಜನಗಾಂವ್ ಜಿಲ್ಲೆಯ ನಿವಾಸಿ. ಒಂದೆಡೆ ಬಡತನ, ಇನ್ನೊಂದೆಡೆ ಎಷ್ಟೇ ಅವಮಾನಗಳು ಎದುರಾದರೂ ತನ್ನ ಗುರಿಯನ್ನು ಮಾತ್ರ ಕಳೆದುಕೊಳ್ಳಲಿಲ್ಲ. ಬದಲಾಗಿ ತನ್ನ ಹೆತ್ತವರನ್ನು ಬಡತನದಿಂದ ಮುಕ್ತಗೊಳಿಸುವುದಷ್ಟೇ ಆತನ ಗುರಿಯಾಗಿತ್ತು. ತನ್ನ ಕನಸುಗಳನ್ನು ನನಸಾಗಿಸಲು ಏಳು ವರ್ಷಗಳ ಕಾಲ ಅವಿರತವಾಗಿ ಶ್ರಮಿಸಿದರು. ಕೊನೆಗೂ ಭರತ್​ ಶ್ರಮಕ್ಕೆ ಫಲ ಸಿಕ್ಕಿದೆ. ಒಂದಲ್ಲ, ಎರಡಲ್ಲ ಒಟ್ಟಿಗೆ ಐದು ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಾರೆ.

    ಕುಟುಂಬದ ಹಿನ್ನೆಲೆ: ಭರತ್ ಅವರು ತೆಲಂಗಾಣದ ಜನಗಾಂವ್​ ಜಿಲ್ಲೆಯ ದೇವರಪ್ಪುಳ ಮಂಡಲದ ಕಡವೆಂಡಿ ಗ್ರಾಮದ ನಿವಾಸಿ. ಭರತ್​ ಪಾಲಕರು ಸಾಮಾನ್ಯ ಕೃಷಿ ಕಾರ್ಮಿಕರು. ತಾಯಿ ಹೆಸರು ಸುಜಾತಾ ಮತ್ತು ತಂದೆ ಹೆಸರು ರವಿ. ಇವರದ್ದು ಕಡು ಬಡತನದ ಕುಟುಂಬ.

    ಶಿಕ್ಷಣ: ಭರತ್ ಅವರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದಾರೆ. ನಂತರ ವಾರಂಗಲ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಮಾಡಿದರು. ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಇ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ವಾರಂಗಲ್‌ನ ಕಾಕತೀಯ ವಿಶ್ವವಿದ್ಯಾನಿಲಯದಿಂದ ಎಂ.ಟೆಕ್ ಸ್ಟ್ರಕ್ಚರಲ್ ಮತ್ತು ಕನ್‌ಸ್ಟ್ರಕ್ಷನ್ ಇಂಜಿನಿಯರಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ.

    ಬಡತನ ಅಡ್ಡಿಯಲ್ಲ: ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಭರತ್​ ನಿರೂಪಿಸಿದ್ದಾರೆ. ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂದು ಭರತ್​ ಸಾಬೀತುಪಡಿಸಿದ್ದಾರೆ. ಒಂದೇ ಒಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುವವರ ನಡುವೆ ಭರತ್‌ ಐದು ಸರ್ಕಾರಿ ನೌಕರಿಗಳನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯ ಕೃಷಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದವರು ತಮ್ಮ ಕನಸುಗಳನ್ನು ನನಸಾಗಿಸಲು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಬಡತನವು ನೈತಿಕತೆಯನ್ನು ದುರ್ಬಲಗೊಳಿಸುತ್ತದೆ. ಆದರೆ, ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಎಲ್ಲವನ್ನೂ ಜಯಿಸಬಹುದು ಎಂಬುದಕ್ಕೆ ಭರತ್ ತಾಜಾ ಉದಾಹರಣೆಯಾಗಿದ್ದಾರೆ.

    ತಮ್ಮ ಶಿಕ್ಷಣವನ್ನು ಎಂ.ಟೆಕ್​ಗೆ ನಿಲ್ಲಿಸದೇ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಲೈಬ್ರರಿ ಮತ್ತು ಇನ್‌ಫರ್ಮೇಷನ್ ಸೈನ್ಸ್‌ನಲ್ಲಿ ಪದವಿಯನ್ನೂ ಸಹ ಭರತ್​ ಪಡೆದಿದ್ದಾರೆ. ನಾವು ಪಡುತ್ತಿರುವ ಕಷ್ಟವನ್ನು ನೀನು ಪಡಬಾರದು, ಚೆನ್ನಾಗಿ ಓದಿ ಸರ್ಕಾರಿ ನೌಕರಿ ಪಡೆಯಬೇಕು ಎಂಬ ಪಾಲಕರ ಕೋರಿಕೆಯನ್ನು ಸವಾಲಾಗಿ ಸ್ವೀಕರಿಸಿದ ಭರತ್, ಪಾಲಕರ ಕನಸನ್ನು ನನಸು ಮಾಡಲು ಹೈದರಾಬಾದಿಗೆ ಹೋಗಿ ಏಳು ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರು.

    ಟೀಕೆಗಳೇ ಆಶೀರ್ವಾದ: ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ಅಥವಾ ಎರಡು ಅಂಕಗಳ ವ್ಯತ್ಯಾಸದಿಂದ ಕೆಲಸ ಕೈತಪ್ಪಿದ ಪ್ರಕರಣಗಳು ನಡೆದಿವೆ. ಇದೇ ರೀತಿಯ ಅನುಭವ ಭರತ್​ಗೂ ಆಗಿದೆ. ಈ ವೇಳೆ ಭರತ್​ ಸಾಕಷ್ಟು ಟೀಕೆಗಳನ್ನು ಸಹ ಎದುರಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಭರತ್, ತನ್ನ ಗುರಿಯನ್ನು ಮಾತ್ರ ಬಿಟ್ಟುಕೊಡಲಿಲ್ಲ. ಟೀಕೆಗಳನ್ನು ಆಶೀರ್ವಾದವಾಗಿ ತೆಗೆದುಕೊಂಡ ಭರತ್​ ತಮ್ಮ ತಯಾರಿಯನ್ನು ಮತ್ತಷ್ಟು ಹೆಚ್ಚಿಸಿದರು. ಇದೀಗ ಒಟ್ಟಿಗೆ ಐದು ಸರ್ಕಾರಿ ನೌಕರಿಗಳನ್ನು ಗಿಟ್ಟಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

    ಇತ್ತೀಚೆಗೆ ಪ್ರಕಟಿಸಲಾದ TSPSC GRL (ಸಾಮಾನ್ಯ ಶ್ರೇಯಾಂಕ ಪಟ್ಟಿ) ಪ್ರಕಾರ, ಭರತ್ ಕೇಂದ್ರ ಗೃಹ ಸಚಿವಾಲಯದಲ್ಲಿ ಐದು ಉದ್ಯೋಗಗಳನ್ನು ಗಿಟ್ಟಿಸಿದ್ದಾರೆ. ಪ್ರಸ್ತುತ ಭರತ್​ ಅವರು ಕೇಂದ್ರ ಗೃಹ ಸಚಿವಾಲಯದಲ್ಲೇ ಕೆಲಸ ಮಾಡುತ್ತಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಸೇರ್ಪಡೆಗೊಂಡ ಭರತ್ ಹೈದರಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲಸ ಮಾಡುವಾಗಲೇ ತೆಲಂಗಾಣ ಲೋಕ ಸೇವಾ ಆಯೋಗ ಹೊರಡಿಸಿದ ಅಧಿಸೂಚನೆಗಳಿಗೆ ಭರತ್​ ಅರ್ಜಿ ಸಲ್ಲಿಸಿದರು. 2022ರ ಸೆಪ್ಟೆಂಬರ್ ತಿಂಗಳಿಂದ 2023ರ ಅಕ್ಟೋಬರ್ ವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಫಲಿತಾಂಶಗಳು ಒಂದೊಂದಾಗಿ ಬಿಡುಗಡೆಯಾದ ಬಳಿಕ ಸಾಮಾನ್ಯ ಶ್ರೇಯಾಂಕ ಪಟ್ಟಿಯ ಪ್ರಕಾರ, ಪ್ರಸ್ತುತ ಗೃಹ ಸಚಿವಾಲಯದ ಉದ್ಯೋಗವು ಸೇರಿದಂತೆ ಇತರೆ ನಾಲ್ಕು ಉದ್ಯೋಗಗಳಾದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ನಗರ ಯೋಜನೆ ಮತ್ತು ಕಟ್ಟಡ ಅಧಿಕಾರಿ, ಸಹಾಯಕ ಇಂಜಿನಿಯರ್ ಮತ್ತು ಗ್ರೂಪ್​-4 ಉದ್ಯೋಗಳನ್ನು ಗಳಿಸಿದರು. ಒಟ್ಟು 5 ಸರ್ಕಾರಿ ಉದ್ಯೋಗಳನ್ನು ಪಡೆದಿದ್ದಾರೆ. ಆದರೆ, ಪ್ರಸ್ತುತ ಗೃಹ ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಪುಸ್ತಕ ಹಾಗೂ ಶುಲ್ಕಕ್ಕಾಗಿ ಪಾಲಕರು ಹಾಗೂ ಸ್ನೇಹಿತರ ನೀಡಿದ ಪ್ರೋತ್ಸಾಹದಿಂದ ನನಗೆ ಈ ಕೆಲಸಗಳು ಸಿಕ್ಕಿವೆ. ಪಾಲಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡಬಾರದು. ಗಂಟೆಗಟ್ಟಲೆ ಓದುವ ಬದಲು ಜಾಣತನದಿಂದ ಓದಬೇಕು ಎಂದು ಭರತ್ ಮಾಧ್ಯಮಗಳ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು. ನಾನು ಸ್ವಂತವಾಗಿ ತಯಾರಿ ನಡೆಸಿದ್ದು, ಯಾವುದೇ ಕೋಚಿಂಗ್‌ಗಳಿಗೆ ಹೋಗಿಲ್ಲ ಎಂದು ಹೇಳಿದರು. ಭರತ್​ ಅವರ ಈ ಯಶೋಗಾಥೆ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದೆ. (ಏಜೆನ್ಸೀಸ್​)

    ಶತಕ ಬಾರಿಸಿದ್ರೂ, ಗೆದ್ರೂ ಸುನೀಲ್​ ನಾರಾಯಣ್​ ನಗುವುದಿಲ್ಲ ಏಕೆ? ಅಸಲಿ ಕಾರಣ ಬಿಚ್ಚಿಟ್ಟ ಆಂಡ್ರೆ ರಸೆಲ್!

    ಭಾಮಾ ದಾಂಪತ್ಯದಲ್ಲಿ ಬಿರುಗಾಳಿ! ಇನ್ಮುಂದೆ ಇದೇ ನನ್ನ ಏಕೈಕ ಆಯ್ಕೆ ಎಂದು ಡಿವೋರ್ಸ್​ ಖಚಿತಪಡಿಸಿದ ನಟಿ

    ಡಗ್​ಔಟ್​ನಲ್ಲಿ ಕಣ್ಣೀರು ಹಾಕಿದ ಹಿಟ್​ಮ್ಯಾನ್​; ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts