More

    ಗ್ರಾಮೀಣ ನಾರಿಯರ ಕೈಗೆ ಡ್ರೋನ್ ತಂತ್ರಜ್ಞಾನ ಬಲ

    ರಮೇಶ ಜಹಗೀರದಾರ್ ದಾವಣಗೆರೆ
     ಡ್ರೋನ್‌ಗಳನ್ನು ಇಂಜಿನಿಯರ್‌ಗಳು, ತಂತ್ರಜ್ಞರು ಮಾತ್ರ ನಿರ್ವಹಣೆ ಮಾಡಬಲ್ಲರು ಎನ್ನುವ ಕಾಲ ಹೋಯಿತು. ಹೆಚ್ಚು ಕಲಿಯದ ಅಥವಾ ಅನಕ್ಷರಸ್ಥ ಗ್ರಾಮೀಣ ಮಹಿಳೆಯರೂ ಆ ಯಂತ್ರಗಳನ್ನು ಹಾರಿಸಬಲ್ಲರು ಎಂಬುದು ಈಗ ಸಾಬೀತಾಗಿದೆ. ‘ನಮೋ ಡ್ರೋನ್ ದೀದಿ’ ಯೋಜನೆಯಡಿ ರಾಜ್ಯದ 110 ಜನ ಆಯ್ದ ಸ್ವಸಹಾಯ ಗುಂಪುಗಳ ಸದಸ್ಯೆಯರು ‘ಡ್ರೋನ್ ಪೈಲಟ್’ಗಳಾಗಿ ಬದಲಾಗುತ್ತಿದ್ದಾರೆ.
     ‘ನಮೋ ಡ್ರೋನ್ ದೀದಿ’ ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾಗಿದೆ. 2023ರ ನ. 30 ರಂದು ಈ ಯೋಜನೆಯನ್ನು ಘೋಷಣೆ ಮಾಡಲಾಯಿತು. ಕಳೆದ ಮಾರ್ಚ್ 11 ರಂದು ದೇಶಾದ್ಯಂತ 1 ಸಾವಿರ ಗ್ರಾಮೀಣ ಮಹಿಳೆಯರಿಗೆ ಪ್ರಧಾನಿ ಮೋದಿ ಡ್ರೋನ್‌ಗಳನ್ನು ವಿತರಿಸಿದರು.
     ಹಳ್ಳಿ ನಾರಿಯರ ಆರ್ಥಿಕ ಸಬಲೀಕರಣ ಮತ್ತು ಹಣಕಾಸು ಸ್ವಾಯತ್ತತೆ ಈ ಯೋಜನೆಯ ಪ್ರಮುಖ ಉದ್ದೇಶ. ದೇಶದಲ್ಲಿ 15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ನೀಡುವ ಗುರಿಯಿದೆ.
     ಕೇಂದ್ರ ರಸಗೊಬ್ಬರ ಇಲಾಖೆ ಅಡಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. 5 ಪ್ರಮುಖ ರಸಗೊಬ್ಬರ ಕಂಪನಿಗಳು ಈ ಕಾರ್ಯದಲ್ಲಿ ಕೈಜೋಡಿಸಿವೆ. ತಲಾ 15 ಡ್ರೋನ್‌ಗಳನ್ನು ಈ ಕಂಪನಿಗಳು ಒದಗಿಸಿದ್ದು ಅವುಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ.
     ಈ ಮಹಿಳೆಯರಿಗೆ ಕಳೆದ ಜನವರಿಯಲ್ಲಿ ಮೈಸೂರಿನಲ್ಲಿ ತರಬೇತಿ ಕೊಟ್ಟು ಅವರಿಗೆ ಡ್ರೋನ್ ಪೈಲಟ್ ಪರವಾನಗಿ ನೀಡಲಾಗಿದೆ. ಇನ್ನೊಂದು ಹಂತದ ತರಬೇತಿ ನೀಡುವುದು ಬಾಕಿಯಿದೆ. ಮುಂಬರುವ ದಿನಗಳಲ್ಲಿ ಅವರಿಗೆ ಇನ್ನಷ್ಟು ತಾಂತ್ರಿಕ ಜ್ಞಾನ ನೀಡುವ ಚಿಂತನೆಯಿದೆ.
     …
     (ಬಾಕ್ಸ್)
     ಕಾರ್ಯ ನಿರ್ವಹಣೆ ಹೇಗೆ?
     ಡ್ರೋನ್ ತಂತ್ರಜ್ಞಾನವನ್ನು ಕೃಷಿಗೆ ಪೂರಕವಾಗಿ ಬಳಸಲಾಗುವುದು. ಡ್ರೋನ್ ಹಾರಾಟ ಮಾಡುವ ಮೂಲಕ ಬೆಳೆಗಳ ಸ್ಥಿತಿಗತಿಯ ಉಸ್ತುವಾರಿಯನ್ನು ನೋಡಿಕೊಳ್ಳಬಹುದು. ಬೆಳೆಗಳಿಗೆ ಅಗತ್ಯವಾದ ರಸಗೊಬ್ಬರ, ಕೀಟನಾಶಕವನ್ನು ಈ ತಂತ್ರಜ್ಞಾನ ಬಳಸಿ ಸಿಂಪರಣೆ ಮಾಡಬಹುದಾಗಿದೆ. ಜಮೀನು ಸರ್ವೇ ಮಾಡಲೂ ಡ್ರೋನ್ ನೆರವಾಗಲಿದೆ. ಕೇವಲ 7 ರಿಂದ 10 ನಿಮಿಷಗಳಲ್ಲಿ 1 ಎಕರೆಯಲ್ಲಿ ಸ್ಪ್ರೇ ಮಾಡಬಹುದಾಗಿದೆ.
     ಇದು ಸ್ವಸಹಾಯ ಗುಂಪುಗಳಿಗೆ ಆದಾಯೋತ್ಪನ್ನ ಚಟುವಟಿಕೆಯಾಗಲಿದೆ. ಸುತ್ತಮುತ್ತಲಿನ ಗ್ರಾಮಗಳ ರೈತರ ಹೊಲಗಳಲ್ಲಿ ಡ್ರೋನ್ ತಂತ್ರಜ್ಞಾನ ಬಳಕೆ ಮಾಡುವುದರಿಂದ ಕೃಷಿಕರಿಗೆ ಆಸರೆಯಾಗಲಿದೆ. ಅಲ್ಪ ಅವಧಿಯಲ್ಲಿ ಹೆಚ್ಚು ಕೆಲಸ ಆಗಲಿದ್ದು ಕಾರ್ಮಿಕರ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ. ಇದು ಸ್ವಸಹಾಯ ಸಂಘಗಳಿಗೆ ಆದಾಯ ತಂದುಕೊಡಲಿದೆ.
     ಜಿಲ್ಲೆಯಲ್ಲಿ ದಾವಣಗೆರೆ ಮತ್ತು ನ್ಯಾಮತಿ ತಾಲೂಕಿನಲ್ಲಿ ತಲಾ ಒಬ್ಬರು, ಹೊನ್ನಾಳಿ ತಾಲೂಕಿನಲ್ಲಿ ಮೂವರು ಮಹಿಳೆಯರು ನಮೋ ಡ್ರೋನ್ ದೀದಿ ಯೋಜನೆಯಡಿ ತರಬೇತಿ ಪಡೆದಿದ್ದಾರೆ. ಆವರಗೊಳ್ಳದ ಶ್ರೀ ವೆಂಕಟೇಶ್ವರ ಸ್ವಸಹಾಯ ಗುಂಪಿನ ಸದಸ್ಯೆಯಾದ ಪಿ. ಸುಜಾತಾ ಅವರಿಗೆ ಡ್ರೋನ್ ನೀಡಲಾಗಿದೆ.
     …
     (ಕೋಟ್)
     ನಾನು ಸಂಜೀವಿನಿ ಒಕ್ಕೂಟದ ಖಜಾಂಚಿಯಾಗಿ, ಸ್ವಚ್ಛ ಸಂಕೀರ್ಣ ಘಟಕದ ಮೇಲ್ವಿಚಾರಕಿಯಾಗಿ ಮಾಡಿದ ಕೆಲಸ, ನನ್ನ ಆಸಕ್ತಿ, ಕೌಶಲಗಳನ್ನು ಗಮನಿಸಿ ಅಧಿಕಾರಿಗಳೇ ನನ್ನ ಹೆಸರನ್ನು ಸೂಚಿಸಿದರು. ನಾನು ಈಗಾಗಲೇ ಒಂದು ಹಂತದ ತರಬೇತಿ ಪಡೆದಿದ್ದೇನೆ. ಡ್ರೋನ್ ನಿರ್ವಹಣೆ ಮಾಡುವುದನ್ನು ಕಲಿತಿದ್ದೇನೆ. ಬೆಳೆಗಳಿಗೆ ಔಷಧ ಸ್ಪ್ರೇ ಮಾಡುವ ಮಾಡುವ ಬಗ್ಗೆ ಇನ್ನೂ ಹೆಚ್ಚಿನ ತಿಳಿವಳಿಕೆಯನ್ನು ಪಡೆಯುತ್ತಿದ್ದೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts