More

    ಭೂಮಿ ಸಿದ್ಧತೆ ಕಾರ್ಯದಲ್ಲಿ ನೇಗಿಲಯೋಗಿ

    ರಮೇಶ ಜಹಗೀರದಾರ್ ದಾವಣಗೆರೆ
     ಜಿಲ್ಲೆಯಲ್ಲಿ ಮುಂಗಾರುಪೂರ್ವ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರತೊಡಗಿವೆ. ಪ್ರಸ್ತುತ ಹಂಗಾಮು ಆಶಾದಾಯಕವಾಗಿರಲಿದೆ ಎನ್ನುವ ಮುನ್ಸೂಚನೆ ಇರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅವರೀಗ ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
     ಮುಂಗಾರು ಹಂಗಾಮಿನಲ್ಲಿ 2.45 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿಯಿದೆ. ಅದರಲ್ಲಿ 1.26 ಲಕ್ಷ ಹೆಕ್ಟೇರ್ ಮೆಕ್ಕೆಜೋಳ, 65 ಸಾವಿರ ಹೆಕ್ಟೇರ್ ಭತ್ತ, 13 ಸಾವಿರ ಹೆಕ್ಟೇರ್ ಶೇಂಗಾ, ಅಷ್ಟೇ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡುವ ಉದ್ದೇಶವಿದೆ.
     ಏಪ್ರಿಲ್‌ನಲ್ಲಿ ಶೇ. 33ರಷ್ಟು ಮಳೆಯ ಕೊರತೆಯಾಗಿತ್ತು. ವಾಡಿಕೆಯಂತೆ 32 ಮಿ.ಮೀ. ಮಳೆಯಾಗಬೇಕಿತ್ತು, 22 ಮಿ.ಮೀ. ಮಾತ್ರ ಆಗಿದೆ. ಆದರೆ ಮೇನಲ್ಲಿ ವಾಡಿಕೆಗಿಂತ ಶೇ. 141 ರಷ್ಟು ಹೆಚ್ಚು ಮಳೆಯಾಗಿದೆ. ವಾಡಿಕೆ 41 ಮಿ.ಮೀ. ಇದ್ದರೆ 99 ಮಿ.ಮೀ. ಮಳೆ ಸುರಿದಿದೆ. ಬರಪೀಡಿತ ಜಗಳೂರು ತಾಲೂಕಿನಲ್ಲಂತೂ 35 ಮಿ.ಮೀ. ವಾಡಿಕೆಗೆ 108 ಮಿ.ಮೀ. ಆಗಿದೆ (ಶೇ. 207 ರಷ್ಟು ಹೆಚ್ಚು). ಇದರಿಂದ ಭೂಮಿ ಹಸಿಯಾಗಿದ್ದು ಕೃಷಿಯ ಆರಂಭಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ.
     ಮುಂಗಾರಿಗೆ 49 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜಗಳ ಅಗತ್ಯವಿದ್ದು 54 ಸಾವಿರ ಕ್ವಿಂಟಾಲ್ ದಾಸ್ತಾನಿದ್ದು ಕೊರತೆಯಿಲ್ಲ. ಜಿಲ್ಲೆಯ 20 ರೈತ ಸಂಪರ್ಕ ಕೇಂದ್ರಗಳಲ್ಲಿ 14 ಸಾವಿರ ಕ್ವಿಂಟಾಲ್ ಬೀಜದ ದಾಸ್ತಾನು ಲಭ್ಯವಿದೆ. ತೊಗರಿ, ಉದ್ದು, ಹೆಸರು, ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ರಾಗಿ, ಸಜ್ಜೆ, ಅಲಸಂದಿ, ಶೇಂಗಾ ಹಾಗೂ ಸೋಯಾ ಅವರೆ ಬೀಜಗಳನ್ನು ಕೃಷಿಕರು ಪಡೆಯಬಹುದಾಗಿದೆ.
     ಹಂಗಾಮಿಗೆ 1.54 ಲಕ್ಷ ಟನ್ ರಸಗೊಬ್ಬರದ ಬೇಡಿಕೆಯಿದೆ. ಜೂನ್ ವರೆಗೆ 73 ಸಾವಿರ ಟನ್ ಬೇಡಿಕೆಯಿದ್ದು 92 ಸಾವಿರ ಟನ್ ದಾಸ್ತಾನಿದೆ.
     …
     (ಬಾಕ್ಸ್)
     ತೊಗರಿ ನಾಟಿಗೆ ಪ್ರೋತ್ಸಾಹ
     ನಾಟಿ ಪದ್ಧತಿಯಡಿ ತೊಗರಿಯನ್ನು ಅಂತರ ಬೆಳೆಯಾಗಿ 100 ಎಕರೆಯಲ್ಲಿ ಬೆಳೆಯಲು ಉದ್ದೇಶಿಸಲಾಗಿದೆ. ಕಳೆದ ವರ್ಷ 10 ಎಕರೆಯಲ್ಲಿ ನಾಟಿ ಮಾಡಲಾಗಿತ್ತು.
     ತೊಗರಿ ಸಸಿಗಳನ್ನು ನಾಟಿ ಮಾಡುವುದರಿಂದ ಬೆಳೆ ಸಾಲುಗಳಲ್ಲಿ ಅಂತರ ಕಾಪಾಡಿಕೊಳ್ಳಬಹುದು. ಆರೋಗ್ಯಕರ ಸಸಿಗಳನ್ನು ನಾಟಿಗೆ ಬಳಸಬಹುದು. ಹೂವಾಡುವ ಹಂತದಲ್ಲಿ ಕುಡಿ ಚಿವುಟುವುದರಿಂದ ಇಳುವರಿ ಹೆಚ್ಚಾಗಲಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಎಕರೆಗೆ 5-6 ಕ್ವಿಂಟಾಲ್ ಮಾತ್ರ ಇಳುವರಿ ಬಂದರೆ ನಾಟಿ ಮಾಡುವುದರಿಂದ ಎಕರೆಗೆ 8-10 ಕ್ವಿಂಟಾಲ್ ಸಿಗುತ್ತದೆ.
     ನಾಲ್ಕು ಸಾಲು ಮೆಕ್ಕೆಜೋಳ ಹಾಕಿ ಒಂದರಿಂದ 2 ಸಾಲು ತೊಗರಿ ನಾಟಿ ಮಾಡಿದರೆ ರೈತರಿಗೆ ಆದಾಯ ತಂದುಕೊಡಬಲ್ಲದು. ಮೆಕ್ಕೆಜೋಳ 4 ತಿಂಗಳಿಗೆ ಕಟಾವಿಗೆ ಬಂದರೆ ತೊಗರಿಗೆ 6 ತಿಂಗಳು ಬೇಕಾಗುತ್ತದೆ. ತೊಗರಿ ನಾಟಿ ಮಾಡಲು ದಾವಣಗೆರೆ ತಾಲೂಕಿನಲ್ಲಿ ಆಲೂರು, ಆನಗೋಡು, ನ್ಯಾಮತಿ ತಾಲೂಕಿನಲ್ಲಿ ಬೆಳಗುತ್ತಿ, ಮಲ್ಲಿಗೇನಹಳ್ಳಿ, ರಾಮೇಶ್ವರ, ಕೆಂಚಿಕೊಪ್ಪ ಭಾಗದಲ್ಲಿ ರೈತರನ್ನು ಗುರುತಿಸಲಾಗಿದೆ.
     …
     (ಬಾಕ್ಸ್)
     ಚೆಲ್ಲು ಭತ್ತ ಪದ್ಧತಿ
     ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. ಈ ಬೆಳೆಗಾರರಿಗೆ ಅನುಕೂಲ ಮಾಡುವ ಉದ್ದೇಶದಿಂದ ಪ್ರಸ್ತುತ ಹಂಗಾಮಿನಲ್ಲಿ ಚೆಲ್ಲು ಭತ್ತ ಪದ್ಧತಿಯನ್ನು ಕೆಲವು ಕಡೆ ಜಾರಿಗೆ ತರುವ ಚಿಂತನೆಯಿದೆ.
     ಕಳೆದ ವರ್ಷ 4 ಸಾವಿರ ಹೆಕ್ಟೇರ್‌ನಲ್ಲಿ ಈ ಪದ್ಧತಿ ಅಳವಡಿಸಲಾಗಿತ್ತು. ಇದರ ಜತೆಗೆ ಬಿಟ್ಟು ಬಿಟ್ಟು ನೀರು ಹಾಯಿಸುವ ಪದ್ಧತಿಯನ್ನು ಅನುಸರಿಸಿದರೆ ಹೆಚ್ಚು ಪರಿಣಾಮಕಾರಿ ಆಗಲಿದ್ದು ಈ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುವುದು ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.
     …
     (ಕೋಟ್)
     ಹವಾಮಾನ ಇಲಾಖೆ ತಜ್ಞರು ಈ ಬಾರಿ ಉತ್ತಮ ಮುಂಗಾರಿನ ಮುನ್ಸೂಚನೆ ನೀಡಿದ್ದಾರೆ. ರೈತರು ಮೆಕ್ಕೆಜೋಳವನ್ನು ಮುಂಗಾರು ಆರಂಭವಾದ ನಂತರ ಬಿತ್ತನೆ ಮಾಡುವುದು ಒಳ್ಳೆಯದು. ಈ ಬಾರಿ ತೊಗರಿ ಮತ್ತು ಬೀನ್ಸ್ ಅನ್ನು ಅಂತರ ಬೆಳೆಯಾಗಿ ಬೆಳೆಯಲು ಉದ್ದೇಶಿಸಲಾಗಿದೆ.
      ಶ್ರೀನಿವಾಸ ಚಿಂತಾಲ್, ಜಂಟಿ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts