

ಕಳೆದ ಒಂದೆರೆಡು ವರ್ಷಗಳಲ್ಲಿ ಓಟಿಟಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ಓಟಿಟಿಯ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಗಿದ್ದು, ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಪುನಃ ಪ್ರಾರಂಭವಾಗುವವರೆಗೂ, ಓಟಿಟಿಯ ಮಹತ್ವ ಇನ್ನಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಇದು ಆಧುನಿಕ ರಾಮಾಚಾರಿಯ ಕಥೆ!
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಓಟಿಟಿಯಲ್ಲೂ ಬರೀ ಕನ್ನಡ ಚಿತ್ರಗಳೇ ಸಿಗುವುದಿಲ್ಲ. ಬೇರೆ ಭಾಷೆಯ ಚಿತ್ರಗಳ ಜತೆಗೆ ಕನ್ನಡ ಚಿತ್ರಗಳೂ ಸಿಗುತ್ತವೆ. ಹೀಗಿರುವಾಗ, ತಂಡವೊಂದು ಬರೀ ಕನ್ನಡ ಚಿತ್ರಗಳಿಗಾಗಿಯೇ ಓನ್ಲಿ ಕನ್ನಡ ಎಂಬ ಹೊಸ ಓಟಿಟಿ ಶುರು ಮಾಡುವುದಕ್ಕೆ ಹೆಜ್ಜೆ ಇಟ್ಟಿದೆ. ಇಲ್ಲಿ ಬರೀ ಸಿನಿಮಾಗಳಷ್ಟೇ ಅಲ್ಲ, ನಾಟಕ, ಕಿರುಚಿತ್ರ, ಸಂಗೀತ-ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ನೋಡಬಹುದಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಆರಂಭವಾದ ಈ ಯೋಚನೆ ಮತ್ತು ಯೋಜನೆಯನ್ನು ಕನ್ನಡದ ಸಾಫ್ಟ್‌ವೇರ್ ಇಂಜಿನಿಯರ್ಗಳು ಇದೀಗ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಈ ಆನ್ಲೈನ್ ವೇದಿಕೆಯು ಕನ್ನಡದ ಯುವ ಕ್ರಿಯಾಶೀಲ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದರ ಜತೆಗೆ, ನಿರ್ಮಾಣದ ಹಂತದಿಂದ ಹಿಡಿದು ಪ್ರದರ್ಶನ ಹಾಗೂ ಆದಾಯ ಸೃಷ್ಟಿಸುವಲ್ಲಿ ಅವಕಾಶ ಮಾಡಿಕೊಡುತ್ತದೆ. ಪ್ರಯೋಗ್ ಸ್ಟುಡಿಯೋ ಹಾಗೂ ಮಯೂರ ಮೋಷನ್ ಪಿಕ್ಚರ್ಸ್ರವರ ಸಹಭಾಗಿತ್ವದಲ್ಲಿ ಈ ಓಟಿಟಿ ಶುರುವಾಗುತ್ತಿದೆ.
ಪ್ರಯೋಗ್ ಸ್ಟುಡಿಯೋನ ಪ್ರದೀಪ್ ಮುಳ್ಳೂರು ಈಗಾಗಲೇ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಮ್ಮ ಪ್ರಯೋಗ್ ಸ್ಟುಡಿಯೋದಲ್ಲಿ ಆಯೋಜನೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಕಲಾವಿದರಿಗೆ ವೇದಿಕೆಯನ್ನು ಸೃಷ್ಟಿಸಿದ್ದಾರೆ. ಹಲವು ನಾಟಕ, ಕಿರುಚಿತ್ರ, ಹಾಗೂ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇನ್ನು, ಮಯೂರ ಮೋಷನ್ ಪಿಕ್ಚರ್ಸ್ನ ಡಿ.ಮಂಜುನಾಥ, ಈಗಾಗಲೇ 'ವೀಕೆಂಡ್' ಹಾಗೂ 'ಉದ್ಘರ್ಷ' (ಸಹ ನಿರ್ಮಾಣ) ಚಿತ್ರಗಳ ನಿರ್ಮಾಣ ಮಾಡುವುದರ ಜತೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಇಬ್ಬರು ಸೇರಿ ಓನ್ಲಿ ಕನ್ನಡ ಶುರು ಮಾಡುತ್ತಿದ್ದಾರೆ. ಓನ್ಲಿ ಕನ್ನಡ ಓಟಿಟಿಯ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದು, ಸದ್ಯದಲ್ಲೇ ಶುರುವಾಗಲಿದೆ.