

ಬೆಂಗಳೂರು: ನಟ ದುನಿಯಾ ವಿಜಯ್, ಸಲಗ ಸಿನಿಮಾ ನಿರ್ದೇಶನ ಮಾಡಿ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈಗಾಗಲೇ ಆ ಚಿತ್ರದ ಬಹುತೇಕ ಕೆಲಸಗಳು ಮುಕ್ತಾಯವಾಗಿವೆ. ಇನ್ನೇನು ಚಿತ್ರಮಂದಿರಕ್ಕೆ ಆ ಸಿನಿಮಾ ಕರೆತರುವ ನಿಟ್ಟಿಯಲ್ಲಿದ್ದಾರವರು. ಹೀಗಿರುವಾಗಲೇ ಇದೇ ದುನಿಯಾ ವಿಜಯ್ ಮತ್ತೊಂದು ಬ್ರೇಕಿಂಗ್ ಸುದ್ದಿ ಕೊಟ್ಟಿದ್ದಾರೆ. ಅದೇನೆಂದರೆ, ಇನ್ನೊಂದು ಸಿನಿಮಾ ನಿರ್ದೇಶನಕ್ಕೆ ವಿಜಯ್ ಪ್ಲಾನ್ ಮಾಡಿದ್ದಾರೆ.
ಹೌದು, ಈಗಾಗಲೇ ಫ್ರೆಶ್ ಕಥೆಯೊಂದನ್ನು ಸಿದ್ಧಪಡಿಸಿರುವ ಅವರು, ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾದರೆ ಆ ಚಿತ್ರದಲ್ಲಿಯೂ ವಿಜಯ್ ಅವರೇ ಹೀರೋನಾ? ಇಲ್ಲ.. ಈ ಸಿನಿಮಾದಲ್ಲಿ ಸಂಪೂರ್ಣ ಹೊಸ ತಂಡವನ್ನೇ ವಿಜಯ್ ಪರಿಚಯಿಸಲಿದ್ದಾರೆ. ಈಗಾಗಲೇ ಹೊಸ ಪ್ರತಿಭೆಗಳ ಹುಟುಕಾಟಕ್ಕೂ ಇಳಿದಿದ್ದಾರೆ.
18 ರಿಂದ 22 ವರ್ಷ ವಯಸ್ಸಿನ ಯುವ ಪ್ರತಿಭೆಗಳಿಗಾಗಿ ಶೋಧ ಕಾರ್ಯದಲ್ಲಿರುವ ವಿಜಯ್, ಈಗಾಗಲೇ ಒಂದಿಷ್ಟು ಮಂದಿಯನ್ನು ಅಂತಿಮ ಮಾಡಿದ್ದಾರೆ. ಅಷ್ಟೇ ಅಲ್ಲ, ದಸರಾ ಹಬ್ಬದ ದಿನದಂದು ಆ ಹೊಸಬರ ಹೆಸರುಗಳನ್ನು ಬಹಿರಂಗಪಡಿಸಲಿದ್ದಾರೆ.
ದುನಿಯಾ ವಿಜಯ್ ಅಂದ ತಕ್ಷಣ ಅಲ್ಲಿ ಆ್ಯಕ್ಷನ್ ಸೀನ್ಗಳೇ ಹೈಲೈಟ್. ಖಡಕ್ ಸಾಹಸ ದೃಶ್ಯಗಳಲ್ಲಿಯೇ ವಿಜಯ್ ಕಾಣಿಸುತ್ತಾರೆ. ಆದರೆ, ಈ ಸಿನಿಮಾ ಮಾತ್ರ ಅದೆಲ್ಲದಕ್ಕಿಂತ ತುಂಬ ವಿಭಿನ್ನವಾಗಿರಲಿದೆಯಂತೆ. ರೊಮ್ಯಾಂಟಿಕ್ ಲವ್ಸ್ಟೋರಿಯ ಜತೆಗೆ ಅವರು ಬರಲಿದ್ದಾರೆ. ಈ ಎಲ್ಲ ಮಾಹಿತಿ ಸದ್ಯದ ಅಪ್ಡೇಟ್. ನವರಾತ್ರಿ ದಿನದಂದೇ ಕಲಾವಿದರು ಯಾರು, ಶೂಟಿಂಗ್ ಯಾವಾಗ, ನಿರ್ಮಾಪಕರು ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.