'ಆರ್​ಆರ್​ಆರ್​' ಚಿತ್ರದಲ್ಲಿನ ಜೂ. ಎನ್​ಟಿಆರ್ ಲುಕ್​ ಬಹಿರಂಗಕ್ಕೆ ದಿನಗಣನೆ

discover
Published on

ಹೈದರಾಬಾದ್​: ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಸದ್ಯ ಹೆಚ್ಚು ಚರ್ಚೆಯಲ್ಲಿರುವ ಸಿನಿಮಾ. ಕಳೆದ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ಈ ಚಿತ್ರದ ಶೂಟಿಂಗ್​ ಈಗಷ್ಟೇ ಆರಂಭವಾಗಿದೆ. ಹೀಗಿರುವಾಗಲೇ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲು ನಿರ್ದೇಶಕರು ಮುಂದೆ ಬಂದಿದ್ದಾರೆ. ಶೀಘ್ರದಲ್ಲಿಯೇ ಜೂ. ಎನ್​ಟಿಆರ್​ ಅವರ ಲುಕ್​ ರಿವೀಲ್​ ಮಾಡಲಿದ್ದಾರೆ ರಾಜಮೌಳಿ.

ಹೌದು, ಈಗಾಗಲೇ ಚಿತ್ರದಲ್ಲಿ ರಾಮ್​ಚರಣ್​ ತೇಜ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಸಣ್ಣ ಟೀಸರ್ ಅನ್ನೇ ಉಡುಗೊರೆ ರೂಪದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಎನ್​ಟಿಆರ್​ ಸರದಿ. ಅ.22ರಂದು ಬೆಳಗ್ಗೆ 11 ಗಂಟೆಗೆ ಚಿತ್ರದ ಕೋಮರಮ್​ ಭೀಮ್​ ಪಾತ್ರವನ್ನು ರಿವೀಲ್​ ಮಾಡಲಿದ್ದಾರೆ.


ಅಂದಹಾಗೆ, ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿರುವ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ವರ್ಷಾಂತ್ಯಕ್ಕೆ ತೆರೆಕಾಣಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.

450 ಕೋಟಿ ರೂ.ಗೂ ಅಧಿಕ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಜೂ. ಎನ್​ಟಿಆರ್, ರಾಮ್​ಚರಣ್​ ತೇಜ, ಆಲಿಯಾ ಭಟ್​, ಅಜಯ್​ ದೇವಗನ್​ ಸೇರಿ ಘಟಾನುಘಟಿ ಕಲಾವಿದರ ದಂಡೇ ನಟಿಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net