

ಬೆಂಗಳೂರು: ಸ್ಯಾಂಡಲ್ವುಡ್ ನಟ ದಿಗಂತ್ ಒಂದಲ್ಲ ಒಂದು ಸಮಸ್ಯೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೆಲವು ವರ್ಷಗಳ ಹಿಂದೆ ಅವರು ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಕೆಲವು ತಿಂಗಳ ಹಿಂದೆ ಗೋವಾದಲ್ಲಿ ಸೋಮರ್ಸಾಲ್ಟ್ ಮಾಡೋಕೆ ಹೋಗಿ ಅವರ ಕತ್ತಿಗೆ ಪೆಟ್ಟಾಗಿತ್ತು. ಇದೀಗ ಅವರ ಕಾಲಿಗೆ ಬ್ಯಾಂಡೇಜ್ ಬಿದ್ದಿದೆ. ದಿಗಂತ್ ಕುಂಟುತ್ತಲೇ ತಮ್ಮ ಹೊಸ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.
ದಿಗಂತ್ ಅಭಿನಯದ ಹೊಸ ಚಿತ್ರ 'ತಿಮ್ಮಯ್ಯ ಅಂಡ್ ತಿಮ್ಮಯ್ಯ' ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಪ್ರಚಾರದ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ದಿಗಂತ್ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಕುಂಟುತ್ತಲೇ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.
ದಿಗಂತ್ ಕಾಲಿಗೆ ಬ್ಯಾಂಡೇಜ್ ಬಿದ್ದಿದ್ದು ಹೇಗೆ ಎಂಬ ಪ್ರಶ್ನೆ ಸಹಜ. ಇತ್ತೀಚೆಗಷ್ಟೇ ಅಪ್ಪು ಕಪ್ ಬ್ಯಾಡ್ಮಿಂಟನ್ ಟೂರ್ನಿ ನಡೆದಿದ್ದು ನೆನಪಿರಬಹುದು. ಬ್ಯಾಡ್ಮಿಂಟನ್ ಚೆನ್ನಾಗಿ ಆಡುವ ದಿಗಂತ್, ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ಆಡುವಾಗ ಅವರ ಕಾಲಿಗೆ ಪೆಟ್ಟು ಬಿದ್ದಿದೆ. 'ಹಳೆಯ ಇಂಜುರಿಯೇ ವಾಸಿಯಾಗಿರಲಿಲ್ಲ. ಈ ಸಂದರ್ಭದಲ್ಲಿ ಆಟ ಆಡೋಕೆ ಹೋಗಿ ಮತ್ತೆ ಏಟು ಆಯ್ತು' ಎನ್ನುತ್ತಾರೆ ದಿಗಂತ್.
ಇನ್ನು, ಈ ಚಿತ್ರದಲ್ಲಿ ಅವರು ಮತ್ತೊಮ್ಮೆ ಅನಂತ್ ನಾಗ್ ಜತೆಗೆ ಅಭಿನಯಸಿದ್ದಾರೆ. ಈ ಹಿಂದೆ ಅನಂತ್ ನಾಗ್ ಜತೆಗೆ ನಟಿಸಿದ್ದರೂ, ಇಬ್ಬರೂ ತೆರೆಯ ಮೇಲೆ ಅಷ್ಟೊಂದು ಸಮಯ ಕಳೆದಿರಲಿಲ್ಲವಂತೆ. 'ಈ ಚಿತ್ರದಲ್ಲಿ ಇಬ್ಬರಿಗೂ ಸ್ಪೇಸ್ ಜಾಸ್ತಿ ಇದೆ. ಅನಂತ್ ನಾಗ್ ಅವರ ಜತೆಗೆ ನಟನೆ ಮಾಡೋಕೆ ಖುಷಿಯಾಗುತ್ತದೆ. ಅವರೊಂದು ಶೃಂಗಾರ ಕಾವ್ಯ ತರಹ. ಅದ್ಭುತ ನಟರು. ಏನು ಕೊಟ್ಟರೂ, ಮಾಡ್ತಾರೆ. ನಗಿಸೋದು, ಅಳಿಸೋದು ಎಲ್ಲವೂ ಸುಲಭ ಅವರಿಗೆ' ಎನ್ನುತ್ತಾರೆ ದಿಗಂತ್. ...
'ತಿಮ್ಮಯ್ಯ & ತಿಮ್ಮಯ್ಯ' ಚಿತ್ರದಲ್ಲಿ ಅನಂತನಾಗ್, ದಿಗಂತ್, ಶುಭ್ರ ಅಯ್ಯಪ್ಪ, ರುಕ್ಮಿಣಿ ವಿಜಯಕುಮಾರ್, ವಿನೀತ್ ಬೀಪ್ ಕುಮಾರ್, ಪ್ರಕಾಶ್ ತುಮ್ಮಿನಾಡ್, ಮಿಮಿಕ್ರಿ ಗೋಪಿ, ಅಂಬುಜಾಕ್ಷಿ ಮುಂತಾದವರು ನಟಿಸಿದ್ದು, ಈ ಚಿತ್ರವನ್ನು ಸಂಜಯ್ ಶರ್ಮ ನಿರ್ದೇಶನ ಮಾಡಿದ್ದಾರೆ.