ರಿಮೇಕ್​ ಸಾವು.. ಬಾಲಿವುಡ್​ಗೆ ಬೇಕಿದೆ​ ವ್ಯಾಕ್ಸಿನ್: ನಿರ್ದೇಶಕ ರಾಮ್​ಗೋಪಾಲ್ ವರ್ಮಾ

RGV
Published on

ಬೆಂಗಳೂರು: ರಿಮೇಕ್​ಗಳ ಸಾವು?!

- ಹೌದು.. ಖ್ಯಾತ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಪ್ರಕಾರ ರಿಮೇಕ್​ಗಳು ಸತ್ತಿವೆ. ದಕ್ಷಿಣ ಭಾರತದ ಸಿನಿಮಾಗಳ ಇತ್ತೀಚಿನ ಯಶಸ್ಸಿನ ಬಳಿಕ ಅವರು ದೇಶದ ಸಿನಿಮಾ ಬೆಳವಣಿಗೆ ಕುರಿತು ವಿಶ್ಲೇಷಣೆ ಮಾಡಿದ್ದು, ರಿಮೇಕ್​ಗಳ ಕಾಲ ಮುಗಿದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೆಜಿಎಫ್​2, ಪುಷ್ಪ, ಆರ್​ಆರ್​ಆರ್​ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಕೆಜಿಎಫ್​2, ಪುಷ್ಪ, ಆರ್​ಆರ್​ಆರ್​ ಡಬ್ಬಿಂಗ್ ವರ್ಷನ್​ಗಳಿಂದಾಗಿ ಒಳ್ಳೆಯ ಕಂಟೆಂಟ್​ ಇರುವ ದಕ್ಷಿಣ ಭಾರತೀಯ ಸಿನಿಮಾಗಳ ರಿಮೇಕ್​ ಹಕ್ಕುಗಳು ಮಾರಾಟವಾಗುತ್ತಿಲ್ಲ. ಏಕೆಂದರೆ ಪ್ರಾದೇಶಿಕ ಸಿನಿಮಾಳ ಕಂಟೆಂಟ್​ ಹಾಗೂ ನಟರನ್ನು ಹಿಂದಿ ಸಿನಿಮಾ ಪ್ರೇಕ್ಷಕರು ಇಷ್ಟಪಡಲಾರಂಭಿಸಿದ್ದಾರೆ ಎಂದಿದ್ದಾರೆ ಆರ್​​ಜಿವಿ.

ಇದೀಗ ಬಾಲಿವುಡ್​ಗೆ ಹಿಂದೆ-ಮುಂದೆ ಎರಡೂ ಕಡೆಯಿಂದ ಹೊಡೆತ ಬೀಳಲಾರಂಭಿಸಿದೆ. ಅವರಿಗೆ ಈಗ ಬಹುಶಃ ಸೂಪರ್​ ಹಿಟ್​ ಸಿನಿಮಾ ಮಾಡುವುದು ಹೇಗೆ ಅಂತಲೂ ತಿಳಿಯುತ್ತಿಲ್ಲ, ಇನ್ನೊಂದೆಡೆ ದಕ್ಷಿಣ ಭಾರತದ ಸಿನಿಮಾ ರಿಮೇಕ್ ಮಾಡೋಣ ಎಂದರೆ ಅವರಿಗೆ ಯಾರೂ ರಿಮೇಕ್​ ರೈಟ್ಸ್ ಕೊಡುತ್ತಿಲ್ಲ ಎಂಬುದು ವರ್ಮಾ ಅಭಿಪ್ರಾಯ.

ಒಟ್ಟಾರೆ ಸಾರ ಏನೆಂದರೆ, ಹಿಂದಿಯಲ್ಲಿ ರಿಮೇಕ್​ ಮಾಡುವುದಕ್ಕಿಂತ ಹಿಂದಿ ಡಬ್​ ವರ್ಷನ್​​ಗಳನ್ನು ಬಿಡುಗಡೆ ಮಾಡುವುದೇ ಉತ್ತಮ. ಏಕೆಂದರೆ ಪ್ರೇಕ್ಷಕರಿಗೆ ಈಗ ಆಸಕ್ತಿಕರ ಅನಿಸುವ ಯಾವುದೇ ಸಬ್ಜೆಕ್ಟ್​ ಯಾವುದೇ ಕಡೆಯಿಂದ ಯಾರದ್ದೇ ಮುಖದಲ್ಲಿ ಬಂದರೂ ಓಕೆ ಅನಿಸಲಾರಂಭಿಸಿದೆ. ಅದರಲ್ಲೂ ಕನ್ನಡ ಹಾಗೂ ತೆಲುಗು ಸಿನಿಮಾಗಳು ಹಿಂದಿ ಚಿತ್ರಗಳನ್ನು ಕೋವಿಡ್ ವೈರಸ್​​ನಂತೆ ಕಾಡುತ್ತಿವೆ. ಬಾಲಿವುಡ್​ ಬೇಗ ಲಸಿಕೆ ಕಂಡುಕೊಳ್ಳುತ್ತದೆ ಎಂದು ಭಾವಿಸಿದ್ದೇನೆ ಎಂದು ರಾಮ್​ಗೋಪಾಲ್ ವರ್ಮಾ ಹಿಂದಿ ಚಿತ್ರರಂಗವನ್ನು ಲೇವಡಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net