

ಬೆಂಗಳೂರು: ಶ್ರೇಯಸ್ ಚಿಂಗಾ ಅಭಿನಯದ ಮತ್ತು ನಿರ್ದೇಶನದ 'ಡೇವಿಡ್' ಚಿತ್ರವು ಈ ಹಿಂದೆ ಕಾನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿತ್ತು. ಈ ಚಿತ್ರವು ಆಗಸ್ಟ್ನಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುನ್ನ ಇತ್ತೀಚೆಗೆ ಟ್ರೇಲರ್ ಹಾಗೂ ಹಾಡು ಬಿಡುಗಡೆ ಇತ್ತೀಚೆಗೆ ಬಿಡುಗಡೆಯಾಗಿದೆ.
'ಡೇವಿಡ್' ಒಂದು ವಿಭಿನ್ನ ಪ್ರಯತ್ನ ಎನ್ನುವ ಶ್ರೇಯಸ್ ಚಿಂಗಾ, 'ನಾನು ಹಾಗೂ ಭಾರ್ಗವ್ ಯೋಗಾಂಬರ್ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದೇವೆ. ನಾನು ನಾಯಕನಾಗೂ ನಟಿಸಿದ್ದೇನೆ. ಸಾರಾ ಹರೀಶ್ ಈ ಚಿತ್ರದ ನಾಯಕಿ. ಅವಿನಾಶ್, ಪ್ರತಾಪ್ ನಾರಾಯಣ್, ರಾಕೇಶ್ ಅಡಿಗ, ಕಾವ್ಯಾ ಶಾ, ಬುಲೆಟ್ ಪ್ರಕಾಶ್ ಮುಂತಾದವರು ಈ ಚಿತ್ರದ ತಾರಬಳಗದಲ್ಲಿದ್ದಾರೆ. ಈ ಚಿತ್ರ ನಾಲ್ಕು ಕಥೆಗಳ ಸುತ್ತ ಸುತ್ತುತ್ತದೆ ನಾಯಕನು ತನ್ನ ಸಾಮರ್ಥ್ಯಕ್ಕೆ ಮೀರಿದ ಶಕ್ತಿಗಳ ವಿರುದ್ಧ ಬಲವಂತವಾಗಿ ತೊಡಗಿಸಿಕೊಳ್ಳುತ್ತಾನೆ. ಇದೇ ಚಿತ್ರದ ಕಥಾಹಂದರ. ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಆಗಸ್ಟ್ ನಲ್ಲಿ ನಮ್ಮ ಚಿತ್ರವನ್ನು ತೆರೆಗೆ ತರುತ್ತೇವೆ' ಎನ್ನುತ್ತಾರೆ.
ಕಾನ್ಸ್ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನಗೊಂಡ ಕುರಿತು ಮಾತನಾಡುವ ಅವರು, 'ನಮ್ಮ ಚಿತ್ರದ ಮತ್ತೊಂದು ವಿಶೇಷವೆಂದರೆ ಅಂತರರಾಷ್ಟ್ರೀಯ ವಿತರಕರನ್ನು ಹೊಂದಿರುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡಿದೆ. ಕಾನ್ಸ್ನಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಇದಾಗಿದೆ. ಸಾಕಷ್ಟು ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಧನರಾಜ್ ಬಾಬು ಅವರು ಈ ಚಿತ್ರವನ್ನು ಅರ್ಪಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ' ಎನ್ನುತ್ತಾರೆ.
ದಿವಂಗತ ನಿಟ್ಟೂರು ಶ್ರೀನಿವಾಸ ರಾವ್ ಅವರ ಮೊಮ್ಮಗ ಅರ್ಜುನ್ ನಿಟ್ಟೂರು ಈ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅವರ ನೇತೃತ್ವದಲ್ಲಿ ಟ್ರೇಲರ್ ಕಟ್ ಮಾಡಲಾಗಿದೆ. .ಅರ್ಜುನ್ ತಮ್ಮ ಸಂಸ್ಥೆಯ ಮೂಲಕ ಈ ಚಿತ್ರವನ್ನು ದೇಶ, ವಿದೇಶಗಳಿಗೆ ಪ್ರಮೋಟ್ ಮಾಡಲಿದ್ದಾರೆ.