

ಬೆಂಗಳೂರು: 'ಲವ್ ಮಾಕ್ಟೇಲ್' ಖ್ಯಾತಿಯ ಕೃಷ್ಣ, ಫೆಬ್ರವರಿ 14ರಂದು ತಮ್ಮ ಬಹುಕಾಲದ ಗೆಳತಿ ಮಿಲನಾ ನಾಗರಾಜ್ ಅವರನ್ನು ಮದುವೆಯಾಗುವುದಕ್ಕೆ ಸಜ್ಜಾಗಿದ್ದಾರೆ. ಈ ಮಧ್ಯೆ, ಅವರು ಬ್ಯಾಚುಲರ್ ಆಗಿ ಮುಂದುವರೆಯುವುದಕ್ಕೆ ತೀರ್ಮಾನಿಸಿದ್ದಾರೆ.
'ಲವ್ ಮಾಕ್ಟೇಲ್' ಚಿತ್ರದ ನಂತರ ಕೃಷ್ಣ ಇದೀಗ ಆ ಚಿತ್ರದ ಮುಂದುವರೆದ ಭಾಗವನ್ನು ನಿರ್ದೇಶಿಸುವುದರ ಜತೆಗೆ, ಅದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, 'ವರ್ಜಿನ್', 'ಶುಗರ್ ಫ್ಯಾಕ್ಟರಿ' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ, ಅವರು 'ಮಿಸ್ಟರ್ ಬ್ಯಾಚುಲರ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.
'ಮಿಸ್ಟರ್ ಬ್ಯಾಚುಲರ್' ಚಿತ್ರದ ಪೋಸ್ಟರ್, ಹೊಸ ವರ್ಷದ ಅಂಗವಾಗಿ ಇಂದು ಬೆಳಿಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ನಾಯ್ಡು ಬಂಡಾರ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಸಹ ಅವರದ್ದೇ. ಶ್ರೀನಿವಾಸ್ ಮತ್ತು ಸ್ವರ್ಣಲತಾ ಎನ್ನುವವರು ಈ ಚಿತ್ರದ ನಿರ್ಮಾಪಕರು. ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಅಂದಹಾಗೆ, ಇಂದು ಚಿತ್ರದ ಟೈಟಲ್ ಮಾತ್ರ ಬಿಡುಗಡೆಯಾಗಿದೆ. ಇನ್ನು ಚಿತ್ರದ ಫಸ್ಟ್ ಲುಕ್ ಸದ್ಯದಲ್ಲೇ ಬಿಡುಗಡೆಯಾಗುತ್ತದಂತೆ. ಈಗ ಒಪ್ಪಿರುವ ಒಂದಿಷ್ಟು ಚಿತ್ರಗಳನ್ನು ಮುಗಿಸಿದ ನಂತರ ಕೃಷ್ಣಮ 'ಮಿಸ್ಟರ್ ಬ್ಯಾಚುಲರ್' ಆಗುವ ಸಾಧ್ಯತೆ ಇದೆ.